Friday, May 6, 2011

ಉಜಿರೆ ಕಾಲೇಜು, ಮಸಾಲೆ ಕಾಫಿ, ಶಾರದ ಮಂಟಪ ಇನ್ನೂ ಇದೆ

ಒಂದು ವರ್ಷದ ಹಿಂದೆ ನಾವು ಕಾಲೇಜನ್ನು ಬಿಟ್ಟು ಬರುವ ಮೊದಲು ಬರೆದ 6ನೇ ಸೆಮಿಸ್ಟರ್ ಪರೀಕ್ಷೆಯ ಸಂದರ್ಭ. ಅದಾಗಲೇ ಮನದ ಯಾವುದೋ ಒಂದು ಮೂಲೆಯಲ್ಲಿ ಒಳ್ಳೆಯ ಕೆಲಸ ಸೇರುವ ಆಸೆ. ನಾವು ಪತ್ರಿಕೋದ್ಯಮದಲ್ಲಿ ಏನೋ ಸಾಧಿಸಿ ಬಿಡುತ್ತೇವೆನೋ ಎಂಬ ಭ್ರಮೆಯಲ್ಲಿ ಹೊರ ಬಂದಿದ್ದೆವು. ಸಾಕಷ್ಟು ಬರೆಯಬೇಕೆಂಬ ಹಂಬಲ ಆಗಲೂ ಇತ್ತು ಇಗಲೂ ಇದೆ. ಆದರೆ ಒತ್ತಡದ ಜೀವನದಲ್ಲಿ ದಿನ ನಿತ್ಯ ಪುಟವೊಂದನ್ನು ತುಂಬಿಸಬೇಕಾದ ಅನಿವಾರ್ಯತೆಯಲ್ಲಿ ಮುಳುಗಿ ಹೋಗಿ ದೀರ್ಘವಾದ ಲೇಖನಗಳನ್ನು ಬರೆಯಲು ಯೋಚಿಸಿದರೆ ವಿಷಯವೇ ಹೊಳೆಯದಂತಾಗುತ್ತದೆ. ಆದರೂ ಅನಿವಾರ್ಯವಾಗಿ ಒಮ್ಮೊಮಮ್ಎ ಬರೆಯಬೇಕೆಂಬ ಹಠದಲ್ಲಿ ಕುಳಿತು ಒಂದೇ ಉಸಿರಲ್ಲಿ ಬರೆದು ಬರೆದ ಕ್ಷಣದಲ್ಲೇ ಮೇಲ್ ಮಾಡಿ ನಿಟ್ಟುಸಿರು ಬಿಡುವಂತಾಗುತ್ತದೆ. ಅದು ಕೂಡಾ ಪ್ರಕಟವಾಗಿ ಬಿಡುತ್ತದೆ. ಅದೇ ಆಶ್ಚರ್ಯ.

ಉಜಿರೆ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳು ಜೀವನವಿಡಿ ಮರೆಯಲಾರದಂತಿವೆ. ಕಾಲೇಜಿನಲ್ಲಿರುವವರೆಗೆ ಎಲ್ಲರನ್ನೂ ಬ್ಐದುಕೊಂಡು ಓಡಾಡುತ್ತಿದ್ದ ನಮಗೆ ಹೊರಗೆ ನಿಂತು ಈಗ ನೋಡಿದಾಗ ಅದೆಲ್ಲವೂ ಸರಿ. ಅದು ಹಾಗೇ ಇರಬೇಕಾಗಿತ್ತು ಅಂತ ಅನ್ನಿಸುತ್ತದೆ. ಕಾಲೇಜು ತುಂಬ ದೊಡ್ಡದೊಂದು ಗೆಳೆಯರ ಬಳಗವನ್ನು ಕಟ್ಟಿಕೊಂಡು ರಾತ್ರಿ ಬೆಳಗಾದರೂ ಜೊತೆಗೆ ಯಾರೋ ಒಬ್ಬನ ರೂಮಿನಲ್ಲಿ ಮಲಗಿಕೊಂಡು ದಿನ ಕಳೆಯುತ್ತಿದ್ದುದ್ದ ಈಗ ಮತ್ತೆ ಮತ್ತೆ ಕಾಡುತ್ತದೆ. ಕಾಲೇಜಿನ ಕಾರಿಡಾರುಗಳು ಮತ್ತೆ ಕಣ್ಣ ಮುಂದೆ ಹಾದು ಹೋಗುತ್ತವೆ.

ಪ್ರತಿ ದಿನ ಕಾಲೇಜು ಬಿಟ್ಟ ನಂತರ ಸಂಜೆ 6 ಅಥವಾ 7ರ ಹೊತ್ತಿಗೆ ಮತ್ತೆ ಕಾಲೇಜಿನ ಕಡೆ ಹೋಗಿ ಜೋಶಿಯ ಜೊತೆ ಸೇರಿಕೊಂಡು ಹರಟುತ್ತಾ ಕಾಲೇಜು ಎದುರಿರುವ ಕ್ಯಾಂಟೀನಿನಲ್ಲಿ ಖಾಲಿ ದೋಸೆ ತಿಂದು ಮಸಾಲೆ ಕಾಫೀ ಹೀರಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ. ಕಾಲೇಜಿನ ಅಧ್ಯಕ್ಷನಾಗಿದ್ದ ರವಿಪ್ರಸಾದನ ಜೊತೆ ಅವನ ಅವಸರದಲ್ಲಿ ಕಾಲೇಜಿನ ಕಾರೀಡಾರುಗಳಲ್ಲಿ ಕಂಡು ಕಾಣದೇ ಹೋಗುತ್ತಿದ್ದುದ್ದು, ರಾತ್ರಿ 2 ಗಂಟೆಯವರೆಗೆ ಶಾರದ ಮಂಟಪದಲ್ಲಿ ಕ್ರಿಕೇಟ್ ಆಡಿ ಭರತಣ್ಣನಲ್ಲಿ ಮಂಗಳಾರತಿ ಮಾಡಿಸಿಕೊಳ್ಳುವುದು, ಸಚಿನ್ ಕದ್ದು ಕದ್ದ ಕಾಲೇಜಿನ ಕಾರಿಡಾರುಗಳಲ್ಲಿ ಇಂದಿಗೂ ನನಗೆ ಗೊತ್ತಾಗದಂತೆ ಯಾರಿಗೋ ಲೈನ್ ಹೊಡೆಯುತ್ತಿದ್ದುದ್ದು, ನಾಯಿಗಳನ್ನು ಕಂಡರೆ ಸಾಕು ಇವನು ಅದೇ ಆಗುತ್ತಿದ್ದ ಹರ್ಷ. ಅವನ ಜೊತೆಗೆ ಇನ್ನೊಬ್ಬ ಡೀಸೆಂಟ್ ಹರ್ಷ. ಇವರಿಬ್ಬರ ಜೊತೆ ಕ್ರಿಮಿನಲ್ ರುದ್ರೇಶ್, ಉದ್ದ ಕೂದಲು ಬಿಟ್ಟು ತಣ್ಣಗೆ ಬಾಂಬು ಸಿಡಿಸುತ್ತಿದ್ದ ಕಿರಣ್ ಜೋಶಿ, ಸದಾ ಅಮಾಯಕನಾಗಿ ಗಡಿಬಿಡಿಯಲ್ಲಿರುತ್ತಿದ್ದ ಶಿವಪ್ರಸಾದ್ ಅವನ ಜೊತೆಗೆ ಅದೇ ದಾರಿಯಲ್ಲಿ ಬರುತ್ತಿದ್ದ ರಮೇಶ, ರಮೇಶನನ್ನು ಸದಾ ರೇಗಿಸುತ್ತಿದ್ದ ನನ್ನ ದೋಸ್ತ್ ದೀಕ್ಷಿತ್, .ನಾನು ಮೂರು ವರ್ಷ ಉಸಿರಾಡಿದ ಶಾರದ ಮಂಟಪ....... ಇನ್ನೂ ಇದೆ,

Friday, February 18, 2011

ನಾಳೆ ಬಾ ಮುಂದೆ ಹೋಗು

ನಾನಿನ್ನೂ ಚಿಕ್ಕವನು. ಸ್ಕೂಲಿನಿಂದ ಸೀಮೇಸುಣ್ಣ ಕದ್ದು ತಂದು ನಮ್ಮ ಮನೆಯ ಮುಂದಿನ ಬಾಗಿಲಿಗೆ ನಾಳೆ ಬಾ ಮುಂದೆ ಹೋಗು ಅಂತ ಬರೆದಿದ್ದೇ. ನಮ್ಮ ಊರಿನ ಹಾಗೂ ಅಕ್ಕಪಕ್ಕದ ಊರಿನ ಎಲ್ಲಾ ಮನೆಯ ಬಾಗಿಲಿನ ಈ ಬರಹ ಕಾಣುತ್ತಿತ್ತು. ಯಾಕೆ ಹೀಗೆ ಬರೆಯುತ್ತಾರೆ ಅಂತ ಯಾರನ್ನಾದರೂ ಕೇಳಿದರೆ, ರಾತ್ರಿ ಮನೆಯಲ್ಲಿ ಮಲಗಿದ್ದಾಗ ದೊಡ್ಡದೊಂದು ದೆವ್ವ ಬರುತ್ತೇ. ಬಂದು ಮನೆಯಲ್ಲಿ ಯಾರದಾದರೂ ಒಂದು ಹೆಸರನ್ನು ಹಿಡಿದು ಕೂಗುತ್ತೇ. ಅವರು ಆ ಅಂತ ಹೇಳಿದರೆ ಮುಗಿಯಿತು ಅಲ್ಲೇ ಸತ್ತು ಹೋಗುತ್ತಾರೆ ಅಂತ ಹೇಳಿದರು.

ಅದನ್ನು ತಪ್ಪಿಸಲು ಇರುವ ಒಂದೇ ಮಾರ್ಗ ನಾಳೆ ಬಾ ಮುಂದೆ ಹೋಗು. ಹೀಗೆ ಮನೆಯ ಮುಂದಿನ ಬಾಗಿಲಿನ ಮೇಲೆಯೋ ಅಥವಾ ಗೋಡೆಯ ಮೇಲೆಯೋ ಬರೆದರೆ ಅದು ನೋಡಿಕೊಂಡು ನಾಳೆ ಬಂದು ನೋಡಿಕೊಳ್ಳುತ್ತೇನೆ ಅಂತ ವಾಪಾಸು ಹೋಗುತ್ತೇ. ದಿನಾಲೂ ಇದೇ ಬರಹವನ್ನು ನೋಡಿ ಮುಂದೆ ಹೋಗುತ್ತದೆ ಎಂದರು ತಿಳಿದವರು. ಅದಕ್ಕೆ ಅಲ್ಲಿಂದ ಒಂದು ಚಾಪೀಸ್ ಕದ್ದು ತಂದು ನಮ್ಮ ಮನೆಯ ಬಾಗಿಲಿನ ಮೇಲೆ ಬರೆದಿದ್ದೇ.

ಮೊನ್ನೆ ರಾತ್ರಿ ಊರಿನ ಕೆಲ ಹುಡುಗರು ಒಟ್ಟಿಗೆ ಕುಳಿತು ಅದು ಇದು ಅಂತ ಹರಟೆ ಒಡೆಯುತ್ತಿದ್ದೆವು.  ಆ ಹರಟೆಯಲ್ಲಿ ಈ ನಾಳೆ ಬಾ ಮುಂದೆ ಹೋಗು ಬಂದು ಬಿದ್ದು ಬಿದ್ದು ನಕ್ಕಿದ್ದೆವು. ಯಾಕೆ ನಾವೆಲ್ಲಾ ಹಾಗೇ ಬರೆದೆವು ಎಂಬ ಚಿಂತನೆಗೆ ತೊಡಗಿದ ನಮ್ಮ ಯುವ ಪಡೆ, ಆಗ ಈಗಿನಂತೆ ಊರತುಂಬ ಕರೆಂಟಿರಲಿಲ್ಲ. ಅದರಿಂದ ಬೆಳಕಿರಲಿಲ್ಲ. ನಾವು ಈಗ ಕುಳಿತು ಮಾತಾಡುತ್ತಿರುವ ಈ ಸೇತುವೆ ಕಟ್ಟೆವರೆಗೂ ಆಗ ಬರುತ್ತಿರಲಿಲ್ಲ. ಇದು ಒಂದು.

ಮತ್ತೆ ಊರಿನಲ್ಲಿ ಯಾರಾದರೂ ಸತ್ತರೆ, ಅದರಲ್ಲೂ ಮದುವೆ ಆಗದವರು ಹೇಳಿ ಕೇಳಿ ವಯಸ್ಸಿಗೆ ಬಂದ ಹುಡುಗಿಯರು ಸತ್ತರೆ ಸತ್ತ ಮನೆಯ ಮುಂದು ಯಾರು ಸುಳಿಯುತ್ತಿರಲಿಲ್ಲ. ಆ ಕೇರಿಯ ಕಡೆಗೂ ನೋಡದೇ ಓಡಿ ಹೋಗುವ ಸ್ಥಿತಿಯದು. ನನ್ನ ಮನೆಯ ಮುಂದೆ ಹಾಳು ಬಿದ್ದ ತೋಟ. ಕತ್ತಲು ಕವಿದಿರುತ್ತಿತ್ತು. ಒಮ್ಮೊಮ್ಮೆ ಬಾರಿ ಧೈರ್ಯ ಬಂದಾಗ ಗಟ್ಟಿ ಮನಸ್ಸು ಮಾಡಿ ಆ ತೋಟದ ಕಡೆಗೆ ನೋಡುತ್ತಿದ್ದೇ.ಅಲ್ಲಿಂದ ಹೊರ ಹೊಮ್ಮುತ್ತಿದ್ದ ಗೋಬೆ ಸೇರಿದಂತೆ ಇತರೆ ಪಕ್ಷಿಗಳ ಕೂಗಾಟವನ್ನು ಕೇಳಿಯೇ ಗಡಗಡ ಶುರುವಾಗುತ್ತಿತ್ತು.

ದೆವ್ವದ ಕಥೆಗಳು ಕೇಳುವುದಕ್ಕಂತು ಬಲು ಇಷ್ಟ. ಆದರೆ ಕತ್ತಲೆಯಲ್ಲಿ ಒಬ್ಬನೇ ಇದ್ದಾಗ ಆ ಕಥೆಗಳು ನೆನಪಾಗುವುದು ನಿಶ್ಚಿತ. ಇದೇ ರೀತಿಯಲ್ಲಿ ನಮ್ಮೂರಿನ ಕೋಡಿಸರ ಎಂದಾಕ್ಷಣ ಅರ್ಧ ಜನ ದೂರ ಹೋಗಿಬಿಡುತ್ತಿದ್ದರು. ಕಾರಣ ಸತ್ತವರನ್ನೆಲ್ಲಾ ಅಲ್ಲಿಯೇ ಸುಡುತ್ತಿದ್ದುದು. ಅಲ್ಲಿ ದೆವ್ವಗಳ ನರ್ತನವಾಗುತ್ತದೆ ಎಂಬ ನಂಬಿಕೆ.

ಆದರೆ ಹಳ್ಳಿಗಳಲ್ಲೂ ಕ್ರಮೇಣ ಈ ಹೆದರಿಕೆ ಕಡಿಮೆಯಾಗುತ್ತಿದೆ. ಕಾರಣ ಮುಂದುವರೆದಂತೆ ಹೊಲಗಳಿಗೆ ನೀರಾವರಿ ಮಾಡಿಕೊಂಡು ರಾತ್ರಿಯ ವೇಳೆಯಲ್ಲೂ ಕರೆಂಟಿನ ಅಭಾವಕ್ಕೆ ಹೆದರಿ ನೀರಾಯಿಸುವ ನೆಪದಲ್ಲಿ ದೆವ್ವಗಳು ಮಾಯವಾಗಿವೆ. ಆದರೆ ಒಂದು ಅನುಮಾನ. ನಮ್ಮ ಹಿಂದಿನವರು ದೆವ್ವಗಳ ಕುರಿತಾಗಿ ವರ್ಣ ರಂಜಿತ ಕಥೆಗಳನ್ನು ಹೇಳುತ್ತಿದ್ದರು. ನಾನ ುದೆವ್ವವನ್ನು ನೋಡಿದ್ದೆ, ಹೆದರಿಸಿದ್ದೆ ಅಂತ ಹೇಳುವುದು ಸ್ಕೋಪ್ ಕಾರಣಕ್ಕಾಗಿಯೇನೋ ಎಂಬ ಅನುಮಾನ ಇತ್ತೀಚೆಗೆ ಕಾಡುತ್ತಿದೆ. 

ಊರ ಅನುಭವಗಳು ಇನ್ನು ಇವೆ ಮತ್ತೆ ಬರೆದುಕೊಳ್ಳುತ್ತೇನೆ.....