Saturday, September 4, 2010

ಹೊಸ ಬ್ಲಾಗಿ ಹೊಸ ಬರಹ.

ಕಾಲೇಜು ಮುಗಿಯಿತು. ಈಗ ಜೀವನ. ಬದುಕು ಅನಿವಾರ್ಯ ಅದೇ ಕಾರಣಕ್ಕೆ ಜೀವನ. ಈಗ ಎಲ್ಲವೂ ನೆನಪು ಮಾತ್ರ. ಉಜಿರೆ ಕಾಲೇಜು ತುಂಬಾ ನೆನಪಾಗುತ್ತದೆ. ಕಾಲೇಜಿನಲ್ಲಿದ್ದಾಗ ಎಲ್ಲರಂತೆ ಎಷ್ಟು ಬೇಗ ಮುಗಿಯುತ್ತದೋ ಎಂಬ ತಳಮಳಗಳು ಈಗ ಮುಗಿಯಿತಲ್ಲ ಎಂಬ ತಳಮಳ.


ಉಜಿರೆ ಕಾಲೇಜು
ಹೊಸ ಬ್ಲಾಗ್ ಮಾಡಿಕೊಂಡಿದ್ದೆ ಹೀಗೆ ಮನಸ್ಸಿಗೆ ಬಂದಿದ್ದೊಷ್ಟು ಬರೆದು ಬಿಡುವ ಎಂಬ ಹೆಬ್ಬಯಕೆಯಿಂದ. ಉಜಿರೆ ಕಾಲೇಜಿನಲ್ಲಿ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದೆ. ಅದು ನನಗೆ ಹೆಮ್ಮಯ ಸಂಗತಿ.

ನಾನು ಬರೆದುಕೊಳ್ಳಲೇ ಬೇಕಾಗಿರುವುದು ನನ್ನ ನೆಚ್ಚಿನ ಅಧ್ಯಾಪಕರ ಕುರಿತಾಗಿಯೇ.ಅಜಯ್ ಸರ್ ಕಾಲೇಜಿನಲ್ಲಿ ಪ್ರತಿ ವಿದ್ಯಾರ್ಥಿಯು ಅವರ ಬಗ್ಗೆ ಮಾತಾಡಿಯೇ ಮಾತಾಡುತ್ತಾನೆ. ಅದು ಪಾಸಿಟಿವ್ ಅಥವಾ ನೆಗೆಟಿವ್ ಆದರೆ ಮಾತಡುವುದಂತು ನೂರಕ್ಕೆ ನೂರರಷ್ಟು ಸತ್ಯ. ನನ್ನ ಪಾಲಿಗಂತು ಶಿಸ್ತಿನ ಸಿಪಾಯಿ. ಅವರ ಬಗ್ಗೆ ಎಲ್ಲಿಲ್ಲದ ಅಭಿಮಾನ. ಆದರೆ ಅದನ್ನು ವ್ಯಕ್ತಪಡಿಸುವ ಅವಕಾಶವೇ ನನ್ನ ಪಾಲಿಗೆ ಸಿಗಲಿಲ್ಲ. ಅವರಿಗೆ ಅದು ಬೇಕಾಗಿಯು ಇರಲಿಲ್ಲ.ನನ್ನ ತರಗತಿಗೆ ಬರದಿದ್ದರು ಪರವಾಗಿಲ್ಲ ನಾನು ನಿಮ್ಮಿಂದ ಸಾಕಷ್ಟು ಕಲಿತೆದ್ದೇನೆ ಸಾರ್.

ಇನ್ನು ನನ್ನ ನೆಚ್ಚಿನ ಗುರುಗಳು ಡಾ.ಬಿ.ಪಿ. ಸಂಪತ್ ಕುಮಾರ್. ಕಾಲೇಜಿಗೆ ಹೋಗಿದ್ದು ಪತ್ರಿಕೋದ್ಯಮಕ್ಕಾದರೂ ನನ್ನನ್ನೂ ಕನ್ನಡದ ಕಡೇ ಸೆಳೆಯುವಲ್ಲಿ ಸಂಪತ್ ಸರ್ ಗೆದ್ದುಬಿಟ್ಟಿದ್ದರು.

ಸಂಪತ್ ಸರ್ ಜೊತೆ ಮಾಡಿದ ಕೆಲಸದ ಅನುಭವದಲ್ಲಿ ಅವರ ತಾಳ್ಮೆ ನನ್ನನ್ನು ಬಹಳವಾಗಿ ಕಾಡಿದೆ. ನಾನು ಶುದ್ಧ ಸೋಮಾರಿ ಆದರೆ ಯಾವತ್ತಿಗೂ ನಾನು ಅವರಿಂದ ಒಳ್ಳೆಯ ಅಭಿಪ್ರಾಯಗಳನ್ನೆ ನಿರೀಕ್ಷಿಸಿ ವಿಭಾಗಕ್ಕೆ ಹೋಗುತ್ತಿದ್ದೆ. ಅವರೆಂದು ನಿರಾಸೆ ಮಾಡಲಿಲ್ಲ. ಕುಪ್ಪಳ್ಳಿಯ ಪ್ರವಾಸ ಜೀವನವಿಡಿ ನೆನಪಿರುತ್ತದೆ. ಅಂಥಹ ಒಂದು ಪ್ರವಾಸವನ್ನು ಮೊದಲ ಬಾರಿಗೆ ನಾನು ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದಾಗ ಮಾಡುವ ಬಯಕೆಯನ್ನು ಅವರು ಈಡೇರಿಸಿದ್ದು ನನಗೆ ಹೆಮ್ಮೆ. ನನ್ನೆಲ್ಲಾ ಸ್ನೇಹಿತರು ಇಂದಿಗೂ ಅದೇ ಪ್ರವಾಸವನ್ನು ಮೆಲುಕು ಹಾಕುತ್ತಾರೆ. ಒಟ್ಟಾಗಿ ಹೋಗಿದ್ದಕ್ಕಿಂತ ಕುಪ್ಪಳ್ಳಿ ಹಾಗೂ ಪುಟ್ಟಪ್ಪ ನನ್ನನ್ನು ಇಂದಿಗೂ ಕಾಡುತ್ತಾರೆ. ಕನ್ನಡ ವಿಭಾಗ ಕನ್ನಡ ಸಂಘದ ಜೊತೆ ಒಳ್ಳೆಯ ಒಡನಾಟವಿಟ್ಟು ಅದರ ಅಡಿಯಲ್ಲಿ ನಮ್ಮೆಲ್ಲರಿಗೂ ಬದುಕು ಕಟ್ಟಿಕೊಟ್ಟದೆ ನಾನದಕ್ಕೆ ಋಣಿ.

ಈ ಸಮಾಜದಲ್ಲಿ ನಾನು ಗುರುತಿಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಲೆಯ ವ್ಯಕ್ತಿ ಅನ್ನಿಸಿಕೊಳ್ಳಬೇಕು ಎಂಬ ಯಾವ ಬಯಕೆಯು ನನ್ನಲ್ಲಿರಲಿಲ್ಲ. ಒಳ್ಳೆಯವನಾಗಿ ಎನಾಗಬೇಕಿದೆ. ಏನಾದರೂ ಈ ಸಮಾಜ ಹೀಗೆ ಇರುತ್ತೆ ನಾನೊಬ್ಬ ಬದಲಾಗಿ ಸಮಾಜ ಬದಲಾಗುತ್ತಾ ಎನ್ನುವ ಮಾನಸಿಕತೆ ನನ್ನಲ್ಲಿ ದಟ್ಟವಾಗಿತ್ತು. ಆದರೆ ಅದೆಲ್ಲವನ್ನು ನನ್ನಿಂದ ತೊಡೆದು ಹಾಕಿದ್ದು ನನ್ನ ಪ್ರೀತಿಯ ಅದ್ಯಾಪಕರಾದ ಡಾ.ಎ. ಜಯಕುಮಾರ್ ಶೆಟ್ಟಿ ಸರ್. ಜಯಕುಮಾರ್ ಸರ್ ನೆನಪಾದ ಕ್ಷಣ ನನಗೆ ಅಪ್ರತಿಕಾರವೇ ಶ್ರೇಷ್ಠ ಆದರ್ಶ ಎನ್ನುವ ವಿವೇಕಾನಂದರ ಮಾತು ನೆನಪಾಗುತ್ತದೆ. ಈ ಮಾತನ್ನು ತರಗತಿಯಲ್ಲಿ ಹೇಳಿ ಹೇಳಿ ಇಂದು ನಾನು ಯಾವುದೇ ಪ್ರತಿಕಾರಕ್ಕೆ ತಕ್ಷಣವೇ ಮುಂದಾಗದೇ ಇರುವುದನ್ನು ಕಲಿಸಿಕೊಟ್ಟಿದ್ದಾರೆ.

ಪ್ರತಿ ದಿನ ಕ್ಲಾಸ್ ನಲ್ಲಿ ನನ್ನನ್ನು ಹುಡುಕಿ ಬಂದಿದ್ದೆನೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಾಗ ನಾನು ತುಂಬ ಖುಷಿ ಪಟ್ಟಿದ್ದೇನೆ. ಎನೇ ಹೇಳಿದರೂ ಒಂದು ಕ್ಷಣ ಸುಮ್ಮನಿರಬೇಕು ಅನ್ನಿಸುವುದು ಜಯ್ ಕುಮಾರ್ ಸರ್ ನೆನಪಾದಾಗ. ಉತ್ಸಾಹ ಎಂಬುದು ನನ್ನಲ್ಲಿ ಒಮ್ಮಲೇ ಬರುತ್ತದೆ. ಅಷ್ಟೇ ಬೇಗವಾಗಿ ಖಾಲಿಯಾಗುತ್ತದೆ. ಆದರೆ ಜಯಕುಮಾರ್ ಸರ್ ನೋಡಿದಾಗ ನನಗೆ ನಾನೇ ಉತ್ಸಾಹ ತುಂಬಿಕೊಳ್ಳಬೇಕೆನಿಸುತ್ತದೆ. ಇದ್ಯಾವುದು ಹೊಗಳಿಕೆಯಲ್ಲ. ಮನಸ್ಸಿಗೆ ಅನ್ನಿಸಿದ್ದು ಬರೆದುಕೊಳ್ಳಬೇಕು ಅನ್ನಿಸಿದ್ದು. ಇನ್ನೂ ಬೇಕಾದಷ್ಠಿದೆ ಬರೆಯಲು ಮುಂದೆ ಅವಕಾಶ ಸಿಕ್ಕಾಗ ಬರೆದುಕೊಳ್ಳುತ್ತೇನೆ. ನಾಳೆ ಶಿಕ್ಷಕರ ದಿನಾಚರಣೆ. ಈ ನೆಪದಲ್ಲಿ ನನ್ನ ಗುರುಗಳನ್ನು ಸ್ಮರಿಸಿಕೊಂಡಿದ್ದೇನೆ.