Tuesday, September 28, 2010

ಮಳೆ ಬಂದು ನದಿಗಳಾದ ಚರಂಡಿಗಳಲ್ಲಿ ಈಜಿದ ನೆನಪು


ಮಳೆಯ ಅಬ್ಬರಕ್ಕೆ ಮುಂದಿನ ರಸ್ತೆ ಕಾಣುತ್ತಿಲ್ಲ. ಎದುರಿನಿಂದ ಬಂದು ಕಪಾಳಕ್ಕೆ ಯಾರೋ ಒಡೆದಂತಹ ಅನುಭವ. ಚಿತ್ರದುರ್ಗದಿಂದ ಹೊಸದುರ್ಗಕ್ಕೆ ಹೋಗುವಷ್ಟರಲ್ಲಿ ಮುಖ ಕೆಂಪಾಗಾಗಿತ್ತು. ಹೊರಡುವಾಗ ಕಾಣದ ಮಳೆ ಹೋಗುವ ಮಧ್ಯೆ ಶುರು ಆಗಿಬಿಟ್ಟಿತು. ಮಳೆಯಿಂದ ತಪ್ಪಿಸಿಕೊಳ್ಳಲು ಈ ಮೊದಲಿದ್ದ ರಸ್ತೆ ಬದಿಯ ಮರಗಳು ಈಗ ಕಾಣೆಯಾಗಿವೆ.
ಒದ್ದೆಯಾಗುವುದು ಅನಿವಾರ್ಯವಾಗಿಬಿಟ್ಟಿತ್ತು. ಒಂದು ಕಡೆಯಿಂದ ಭಯ. ಎದುರಿನಿಂದ ಬಂದವನಿಗೆ ನನ್ನ ಬೈಕ್ ಕಾಣದೆ ಹೊಡೆದು ಬಿಟ್ಟರೆ ಈ ಮಳೆಯ ನೀರಿನಲ್ಲಿ ನನ್ನ ರಕ್ತವು ಕಾಣುವುದಿಲ್ಲ ಎಂಬ ಅನೇಕ ಯೋಚನೆಗಳು ಅಬ್ಬರದ ಮಳೆಯಲ್ಲೂ ನನ್ನ ತಲೆ ತುಂಬ ಗಿರಕಿ ಹೊಡೆಯುತ್ತಿದ್ದವು.
ಹೋಗುವುದು ಅನಿವಾರ್ಯವಾಗಿತ್ತು. ಏನು ಬೇಕಾದರೂ ಆಗಲಿ ಅಂದುಕೊಂಡು ಹೋಗುತ್ತಲೇ ಇದ್ದೆ. ಶಿವಗಂಗದಿಂದ ಎಡಕ್ಕೆ ತಿರುಗಿ ಹೊಸದೊಂದು ದಾರಿಯಲ್ಲಿ ಹೊಸದುರ್ಗದ ಕಡೆ ಹೊರಟೆ.
ಹೊಸದರ್ಗದವರೆಗೆ ಸಿಗುವ ಎಲ್ಲವೂ ಹಳ್ಳಿಗಳೆ. ಮಳೆ ಮತ್ತು ಹಳ್ಳಿಗಳ ಜನರು ಆ ಮಳೆಯಲ್ಲೂ ರಸ್ತೆಯಲ್ಲಿ ಏನೇನೊ ಕೆಲಸದಲ್ಲಿ ತೊಡಗಿರುವುದನ್ನು ನೋಡಿ ನೆನಪುಗಳು ಮೆರವಣಿಗೆ ಹೊರಟು ಬಿಟ್ಟವು.
ಮಳೆ ಬಂದು ನಿಂತರೆ ಸಾಕು ಊರ ಸುತ್ತಮುತ್ತಾ ಎಲ್ಲೆಲ್ಲಿ ದೊಡ್ಡ ದೊಡ್ಡ ಗುಂಡಿಗಳಿರುತ್ತವೊ ಅವೆಲ್ಲವನ್ನೂ ಒಮ್ಮೆ ಓಡೋಡಿ ನೋಡಿ ಬರಬೇಕು. ನೋಡದಿದ್ದರೆ ಏನೋ ಕಳೆದುಕೊಳ್ಳುವ ತವಕ. ಮನೆಯಲ್ಲಿ ಗೊತ್ತಾಗದ ಹಾಗೇ ಅಲ್ಲಿಯೆ ಬಟ್ಟೆ ಬಿಚ್ಚಿ ಈಜಿದ್ದು ಇದೆ. ಇನ್ನು ಮುಂದೆ ಹೋಗಿ ಮಳೆ ಬಂದು ನಿಂತ ತಕ್ಷಣ ಊರಲ್ಲಿರುವ ಚರಂಡಿಗಳು ತುಂಬಿ ಹರಿಯುವಾಗ ನದಿಗಳಂತೆ ಕಾಣುತ್ತಿದ್ದವು. ಆ ನದಿಗಳಲ್ಲಿ ಓರಗೆಯ ಹುಡುಗರೆಲ್ಲಾ ಬಿದ್ದು ಕೈ ಕಾಲು ಬಡಿದು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಮತ್ತೆ ಬಡಿಸಿಕೊಳ್ಳುತ್ತಿದ್ದುದ್ದು ಉಂಟು.
ಅದಾಗಿ ಸ್ವಲ್ಪ ದೊಡ್ಡವರಾಗುವ ಹೊತ್ತಿಗೆ ಮನೆಯಲ್ಲಿದ್ದ ಗೋಣಿ ಚೀಲವನ್ನು ಅಜ್ಜಿಯರು ಮಾಡಿಕೊಡುವ ಕೊಪ್ಪೆ ಎಂದು ಹೇಳುವ ಅದನ್ನು ತಲೆಗೆ ಹಾಕಿಕೊಂಡು ಊರೆಲ್ಲಾ ಸುತ್ತುವುದು. ಆ ಸಂದರ್ಭಕ್ಕೆ ಊರಿನ ವಾತವರಣವೂ ಹಾಗೇ ಇತ್ತು. ಮಳೆ ನಿಂತ ತಕ್ಷಣ ದೊಡ್ಡವರೆಲ್ಲಾ ಒಂದು ಸಾರಿ ಎಲ್ಲೆಲ್ಲಿ ಏನಾಗಿದೆ ಎಲ್ಲೆಲ್ಲಿ ಮನೆ ಬಿದ್ದಿದೆ. ಯಾವ್ಯಾವ ತೋಟದಲ್ಲಿ ಮರ ಬಿದ್ದಿದೆ ಎಂದು ಸುತ್ತು ಹೊಡೆಯುತ್ತಿದ್ದರು. ಅವರ ನಹಂತರದ ತಲೆಮಾರು ನಾವೇ ಎಂಬ ಭ್ರಮೆಯಲ್ಲಿ ನಾವು ಅವರಿಂದೆ ತಿರುಗಿದ ಅನುಭವ ಮುಗಿವ ಹೊತ್ತಿಗೆ ಹೊಸದುರ್ಗ ಮುಟ್ಟಿದ್ದೆ.

No comments:

Post a Comment