Saturday, October 2, 2010

ದೇಶದ ಜನರು ಗೆದ್ದರು, ಅಲಹಬಾದ್ ಹೈಕೋರ್ಟ್ ಕೂಡಾ ಗೆದ್ದು ಬಿಟ್ಟಿತು

ಅಲಹಬಾದ್ ಹೈಕೋರ್ಟ್ ಕೊನೆಗೂ ಗೆದ್ದು ಬಿಟ್ಟಿತು.

 ಹಿಂದು ಹಾಗೂ ಮುಸ್ಲಿಂ ಇಬ್ಬರ ನಡುವೆ ಯಾರ ಕಡೆಗೆ ಅಯೋಧ್ಯೆ ಒಲಿಯುತ್ತದೆ ಎಂಬ ಕುತೂಹಲ ಬಾಬ್ರಿ ಮಸೀದಿ ನೆಲಸಮವಾದ ದಿನದಿಂದ ಎಲ್ಲರ ತಲೆಯಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿತ್ತು.

ಆದರೆ ಆಗಿದ್ದೇ ಬೇರೆ. ಇಲ್ಲಿ ಯಾರು ಗೆಲ್ಲಲಿಲ್ಲ, ಅಲಹಬಾದ್ ಹೈಕೋರ್ಟ್ ಗೆದ್ದು ಬಿಟ್ಟಿತು. ಇಡೀ ದೇಶದ ಜನ ಈ ತೀರ್ಪನ್ನು ಮೆಚ್ಚಿದ್ದಾರೆ. ಅಯೋಧ್ಯೆಯನ್ನು ಬಹುವಾಗಿ ಅಚ್ಚಿಕೊಂಡಿದ್ದ ಜನರಲ್ಲಿ ಇತ್ತೀಚೆಗೆ ಬಂದಿದ್ದ ಭೋಪಾಲ್ ದುರಂತದ ತೀರ್ಪನ್ನು ನೋಡಿ ಎಲ್ಲೊ ಒಂದು ಕಡೆ ಆತಂಕವಿತ್ತು.

ಇದಷ್ಟೇ ಅಲ್ಲದೇ ಇಡೀ ದೇಶದಲ್ಲಿ ತೀರ್ಪು ಬಂದ ಮರು ಕ್ಷಣದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಸಾವಿರಾರು ಜನರ ಮಾರಣ ಹೋಮ ನಡೆಯುತ್ತದೆ ಎಂಬ ಭಯಂಕರವಾದ ಭಯವಿತ್ತು. ಆದರೆ ಅದೇನು ನಡೆಯಲಿಲ್ಲ. ಕೆಲವರಂತು ಇನ್ನು 15 ದಿನಗಳ ಕಾಲ ಬಂದ್ ಆಗುತ್ತದೆ ಬೈಕಿಗೆ ಪೆಟ್ರೋಲ್ ತುಂಬಿಸಿಕೊಳ್ಳಬೇಕು. ಮೊಬೈಲ್ಗೆ ಕರೆನ್ಸಿ ಹಾಕಿಸಬೇಕು ಎಂದು ಓಡಾಡಿ ಎಲ್ಲದಕ್ಕೂ ರೆಡಿಯಾಗಿದ್ದ ಘಟನೆಯನ್ನು ನೋಡಿದವರಲ್ಲು ಗಾಬರಿ ಮನೆ ಮಾಡುತ್ತಿತ್ತು.

ದೇಶದ ಜನ ಗೆದ್ದಿದ್ದಾರೆ,ತೀರ್ಪನ್ನು ಮೆಚ್ಚಿದ್ದಾರೆ. ಆದರೆ ಸುನ್ನಿ ವಕ್ಫ್ ಬೋರ್ಡ್ ಇದನ್ನು ಒಪ್ಪಿಕೊಳ್ಳಬೇಕಿತ್ತು. ಕಾರಣ ಒಂದು ಕೋರ್ಟ್ ಶ್ರೀರಾಮ ಅಯೋಧ್ಯೆಯಲ್ಲಿದ್ದಿದ್ದು ನಿಜ. ಅವನು ಅಲ್ಲಿ  ಹುಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದೆ. ಆದರೂ ಇವರು ಮುಂದುವರೆದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತದೆ.

ಅವರು ಮುಂದುವರೆದಿದ್ದನ್ನು ನೋಡಿ ಹಿಂದೂ ಮಹಾ ಸಭಾ ಕೂಡಾ ಈಗ ಮೂರನೇ ಒಂದು ಭಾಗ ಕೊಟ್ಟಿರುವುದನ್ನು ವಿರೋಧಿಸಿ ಸುಪ್ರೀಂ ಮೆಟ್ಟಲೇರಲು ಹೊರಟಿರುವುದು ಗಮನಿಸಬೇಕಾದ ಅಂಶ. ಇಲ್ಲಿ ಕೋರ್ಟ್ ಕೂಡಾ ದೇಶದಲ್ಲಿ ಹಿಂಸಾಚಾರ ಸಂಭವಿಸುವುದು ಬೇಡ ಮತ್ತು ಅವರಿಗೆ ಬೇಸರವಾಗುವುದು ಬೇಡ ಉದ್ದೇಶದಿಂದ ಸುನ್ನಿ ವಕ್ಫ್ ಬೋರ್ಡ್ ಗೆ ಭಾಗ ಕೊಟ್ಟಿದೆ ಎಂಬ ಮಾತುಗಳು ಜನ ಸಾಮಾನ್ಯರ ನಡುವುನಿಂದ ಕೇಳಿ ಬರುತ್ತಿವೆ.

ಕೊನೆಯದಾಗಿ ಕರುಣಾನಿಧಿ ನೆನಪಿಗೆ ಬರುತ್ತಾರೆ. ಕಾರಣ ಈ ಹಿಂದೆ ರಾಮಸೇತು ವಿವಾದವಾಗಿದ್ದಾಗ ರಾಮ ಇದ್ದಿದ್ದು ಸುಳ್ಳು, ಅವನು ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಎಂಬ ಅವರಷ್ಟೇ ತೂಕದ ಪ್ರಶ್ನೆ ಎತ್ತಿದ್ದರು. ಈಗ ಅಲಹಬಾದ್ ಹೈಕೋರ್ಟ್ ಸರಿಯಾದ ಉತ್ತರ ಕೊಟ್ಟದೆ.

Tuesday, September 28, 2010

ಮಳೆ ಬಂದು ನದಿಗಳಾದ ಚರಂಡಿಗಳಲ್ಲಿ ಈಜಿದ ನೆನಪು


ಮಳೆಯ ಅಬ್ಬರಕ್ಕೆ ಮುಂದಿನ ರಸ್ತೆ ಕಾಣುತ್ತಿಲ್ಲ. ಎದುರಿನಿಂದ ಬಂದು ಕಪಾಳಕ್ಕೆ ಯಾರೋ ಒಡೆದಂತಹ ಅನುಭವ. ಚಿತ್ರದುರ್ಗದಿಂದ ಹೊಸದುರ್ಗಕ್ಕೆ ಹೋಗುವಷ್ಟರಲ್ಲಿ ಮುಖ ಕೆಂಪಾಗಾಗಿತ್ತು. ಹೊರಡುವಾಗ ಕಾಣದ ಮಳೆ ಹೋಗುವ ಮಧ್ಯೆ ಶುರು ಆಗಿಬಿಟ್ಟಿತು. ಮಳೆಯಿಂದ ತಪ್ಪಿಸಿಕೊಳ್ಳಲು ಈ ಮೊದಲಿದ್ದ ರಸ್ತೆ ಬದಿಯ ಮರಗಳು ಈಗ ಕಾಣೆಯಾಗಿವೆ.
ಒದ್ದೆಯಾಗುವುದು ಅನಿವಾರ್ಯವಾಗಿಬಿಟ್ಟಿತ್ತು. ಒಂದು ಕಡೆಯಿಂದ ಭಯ. ಎದುರಿನಿಂದ ಬಂದವನಿಗೆ ನನ್ನ ಬೈಕ್ ಕಾಣದೆ ಹೊಡೆದು ಬಿಟ್ಟರೆ ಈ ಮಳೆಯ ನೀರಿನಲ್ಲಿ ನನ್ನ ರಕ್ತವು ಕಾಣುವುದಿಲ್ಲ ಎಂಬ ಅನೇಕ ಯೋಚನೆಗಳು ಅಬ್ಬರದ ಮಳೆಯಲ್ಲೂ ನನ್ನ ತಲೆ ತುಂಬ ಗಿರಕಿ ಹೊಡೆಯುತ್ತಿದ್ದವು.
ಹೋಗುವುದು ಅನಿವಾರ್ಯವಾಗಿತ್ತು. ಏನು ಬೇಕಾದರೂ ಆಗಲಿ ಅಂದುಕೊಂಡು ಹೋಗುತ್ತಲೇ ಇದ್ದೆ. ಶಿವಗಂಗದಿಂದ ಎಡಕ್ಕೆ ತಿರುಗಿ ಹೊಸದೊಂದು ದಾರಿಯಲ್ಲಿ ಹೊಸದುರ್ಗದ ಕಡೆ ಹೊರಟೆ.
ಹೊಸದರ್ಗದವರೆಗೆ ಸಿಗುವ ಎಲ್ಲವೂ ಹಳ್ಳಿಗಳೆ. ಮಳೆ ಮತ್ತು ಹಳ್ಳಿಗಳ ಜನರು ಆ ಮಳೆಯಲ್ಲೂ ರಸ್ತೆಯಲ್ಲಿ ಏನೇನೊ ಕೆಲಸದಲ್ಲಿ ತೊಡಗಿರುವುದನ್ನು ನೋಡಿ ನೆನಪುಗಳು ಮೆರವಣಿಗೆ ಹೊರಟು ಬಿಟ್ಟವು.
ಮಳೆ ಬಂದು ನಿಂತರೆ ಸಾಕು ಊರ ಸುತ್ತಮುತ್ತಾ ಎಲ್ಲೆಲ್ಲಿ ದೊಡ್ಡ ದೊಡ್ಡ ಗುಂಡಿಗಳಿರುತ್ತವೊ ಅವೆಲ್ಲವನ್ನೂ ಒಮ್ಮೆ ಓಡೋಡಿ ನೋಡಿ ಬರಬೇಕು. ನೋಡದಿದ್ದರೆ ಏನೋ ಕಳೆದುಕೊಳ್ಳುವ ತವಕ. ಮನೆಯಲ್ಲಿ ಗೊತ್ತಾಗದ ಹಾಗೇ ಅಲ್ಲಿಯೆ ಬಟ್ಟೆ ಬಿಚ್ಚಿ ಈಜಿದ್ದು ಇದೆ. ಇನ್ನು ಮುಂದೆ ಹೋಗಿ ಮಳೆ ಬಂದು ನಿಂತ ತಕ್ಷಣ ಊರಲ್ಲಿರುವ ಚರಂಡಿಗಳು ತುಂಬಿ ಹರಿಯುವಾಗ ನದಿಗಳಂತೆ ಕಾಣುತ್ತಿದ್ದವು. ಆ ನದಿಗಳಲ್ಲಿ ಓರಗೆಯ ಹುಡುಗರೆಲ್ಲಾ ಬಿದ್ದು ಕೈ ಕಾಲು ಬಡಿದು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಮತ್ತೆ ಬಡಿಸಿಕೊಳ್ಳುತ್ತಿದ್ದುದ್ದು ಉಂಟು.
ಅದಾಗಿ ಸ್ವಲ್ಪ ದೊಡ್ಡವರಾಗುವ ಹೊತ್ತಿಗೆ ಮನೆಯಲ್ಲಿದ್ದ ಗೋಣಿ ಚೀಲವನ್ನು ಅಜ್ಜಿಯರು ಮಾಡಿಕೊಡುವ ಕೊಪ್ಪೆ ಎಂದು ಹೇಳುವ ಅದನ್ನು ತಲೆಗೆ ಹಾಕಿಕೊಂಡು ಊರೆಲ್ಲಾ ಸುತ್ತುವುದು. ಆ ಸಂದರ್ಭಕ್ಕೆ ಊರಿನ ವಾತವರಣವೂ ಹಾಗೇ ಇತ್ತು. ಮಳೆ ನಿಂತ ತಕ್ಷಣ ದೊಡ್ಡವರೆಲ್ಲಾ ಒಂದು ಸಾರಿ ಎಲ್ಲೆಲ್ಲಿ ಏನಾಗಿದೆ ಎಲ್ಲೆಲ್ಲಿ ಮನೆ ಬಿದ್ದಿದೆ. ಯಾವ್ಯಾವ ತೋಟದಲ್ಲಿ ಮರ ಬಿದ್ದಿದೆ ಎಂದು ಸುತ್ತು ಹೊಡೆಯುತ್ತಿದ್ದರು. ಅವರ ನಹಂತರದ ತಲೆಮಾರು ನಾವೇ ಎಂಬ ಭ್ರಮೆಯಲ್ಲಿ ನಾವು ಅವರಿಂದೆ ತಿರುಗಿದ ಅನುಭವ ಮುಗಿವ ಹೊತ್ತಿಗೆ ಹೊಸದುರ್ಗ ಮುಟ್ಟಿದ್ದೆ.