Friday, May 6, 2011

ಉಜಿರೆ ಕಾಲೇಜು, ಮಸಾಲೆ ಕಾಫಿ, ಶಾರದ ಮಂಟಪ ಇನ್ನೂ ಇದೆ

ಒಂದು ವರ್ಷದ ಹಿಂದೆ ನಾವು ಕಾಲೇಜನ್ನು ಬಿಟ್ಟು ಬರುವ ಮೊದಲು ಬರೆದ 6ನೇ ಸೆಮಿಸ್ಟರ್ ಪರೀಕ್ಷೆಯ ಸಂದರ್ಭ. ಅದಾಗಲೇ ಮನದ ಯಾವುದೋ ಒಂದು ಮೂಲೆಯಲ್ಲಿ ಒಳ್ಳೆಯ ಕೆಲಸ ಸೇರುವ ಆಸೆ. ನಾವು ಪತ್ರಿಕೋದ್ಯಮದಲ್ಲಿ ಏನೋ ಸಾಧಿಸಿ ಬಿಡುತ್ತೇವೆನೋ ಎಂಬ ಭ್ರಮೆಯಲ್ಲಿ ಹೊರ ಬಂದಿದ್ದೆವು. ಸಾಕಷ್ಟು ಬರೆಯಬೇಕೆಂಬ ಹಂಬಲ ಆಗಲೂ ಇತ್ತು ಇಗಲೂ ಇದೆ. ಆದರೆ ಒತ್ತಡದ ಜೀವನದಲ್ಲಿ ದಿನ ನಿತ್ಯ ಪುಟವೊಂದನ್ನು ತುಂಬಿಸಬೇಕಾದ ಅನಿವಾರ್ಯತೆಯಲ್ಲಿ ಮುಳುಗಿ ಹೋಗಿ ದೀರ್ಘವಾದ ಲೇಖನಗಳನ್ನು ಬರೆಯಲು ಯೋಚಿಸಿದರೆ ವಿಷಯವೇ ಹೊಳೆಯದಂತಾಗುತ್ತದೆ. ಆದರೂ ಅನಿವಾರ್ಯವಾಗಿ ಒಮ್ಮೊಮಮ್ಎ ಬರೆಯಬೇಕೆಂಬ ಹಠದಲ್ಲಿ ಕುಳಿತು ಒಂದೇ ಉಸಿರಲ್ಲಿ ಬರೆದು ಬರೆದ ಕ್ಷಣದಲ್ಲೇ ಮೇಲ್ ಮಾಡಿ ನಿಟ್ಟುಸಿರು ಬಿಡುವಂತಾಗುತ್ತದೆ. ಅದು ಕೂಡಾ ಪ್ರಕಟವಾಗಿ ಬಿಡುತ್ತದೆ. ಅದೇ ಆಶ್ಚರ್ಯ.

ಉಜಿರೆ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳು ಜೀವನವಿಡಿ ಮರೆಯಲಾರದಂತಿವೆ. ಕಾಲೇಜಿನಲ್ಲಿರುವವರೆಗೆ ಎಲ್ಲರನ್ನೂ ಬ್ಐದುಕೊಂಡು ಓಡಾಡುತ್ತಿದ್ದ ನಮಗೆ ಹೊರಗೆ ನಿಂತು ಈಗ ನೋಡಿದಾಗ ಅದೆಲ್ಲವೂ ಸರಿ. ಅದು ಹಾಗೇ ಇರಬೇಕಾಗಿತ್ತು ಅಂತ ಅನ್ನಿಸುತ್ತದೆ. ಕಾಲೇಜು ತುಂಬ ದೊಡ್ಡದೊಂದು ಗೆಳೆಯರ ಬಳಗವನ್ನು ಕಟ್ಟಿಕೊಂಡು ರಾತ್ರಿ ಬೆಳಗಾದರೂ ಜೊತೆಗೆ ಯಾರೋ ಒಬ್ಬನ ರೂಮಿನಲ್ಲಿ ಮಲಗಿಕೊಂಡು ದಿನ ಕಳೆಯುತ್ತಿದ್ದುದ್ದ ಈಗ ಮತ್ತೆ ಮತ್ತೆ ಕಾಡುತ್ತದೆ. ಕಾಲೇಜಿನ ಕಾರಿಡಾರುಗಳು ಮತ್ತೆ ಕಣ್ಣ ಮುಂದೆ ಹಾದು ಹೋಗುತ್ತವೆ.

ಪ್ರತಿ ದಿನ ಕಾಲೇಜು ಬಿಟ್ಟ ನಂತರ ಸಂಜೆ 6 ಅಥವಾ 7ರ ಹೊತ್ತಿಗೆ ಮತ್ತೆ ಕಾಲೇಜಿನ ಕಡೆ ಹೋಗಿ ಜೋಶಿಯ ಜೊತೆ ಸೇರಿಕೊಂಡು ಹರಟುತ್ತಾ ಕಾಲೇಜು ಎದುರಿರುವ ಕ್ಯಾಂಟೀನಿನಲ್ಲಿ ಖಾಲಿ ದೋಸೆ ತಿಂದು ಮಸಾಲೆ ಕಾಫೀ ಹೀರಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ. ಕಾಲೇಜಿನ ಅಧ್ಯಕ್ಷನಾಗಿದ್ದ ರವಿಪ್ರಸಾದನ ಜೊತೆ ಅವನ ಅವಸರದಲ್ಲಿ ಕಾಲೇಜಿನ ಕಾರೀಡಾರುಗಳಲ್ಲಿ ಕಂಡು ಕಾಣದೇ ಹೋಗುತ್ತಿದ್ದುದ್ದು, ರಾತ್ರಿ 2 ಗಂಟೆಯವರೆಗೆ ಶಾರದ ಮಂಟಪದಲ್ಲಿ ಕ್ರಿಕೇಟ್ ಆಡಿ ಭರತಣ್ಣನಲ್ಲಿ ಮಂಗಳಾರತಿ ಮಾಡಿಸಿಕೊಳ್ಳುವುದು, ಸಚಿನ್ ಕದ್ದು ಕದ್ದ ಕಾಲೇಜಿನ ಕಾರಿಡಾರುಗಳಲ್ಲಿ ಇಂದಿಗೂ ನನಗೆ ಗೊತ್ತಾಗದಂತೆ ಯಾರಿಗೋ ಲೈನ್ ಹೊಡೆಯುತ್ತಿದ್ದುದ್ದು, ನಾಯಿಗಳನ್ನು ಕಂಡರೆ ಸಾಕು ಇವನು ಅದೇ ಆಗುತ್ತಿದ್ದ ಹರ್ಷ. ಅವನ ಜೊತೆಗೆ ಇನ್ನೊಬ್ಬ ಡೀಸೆಂಟ್ ಹರ್ಷ. ಇವರಿಬ್ಬರ ಜೊತೆ ಕ್ರಿಮಿನಲ್ ರುದ್ರೇಶ್, ಉದ್ದ ಕೂದಲು ಬಿಟ್ಟು ತಣ್ಣಗೆ ಬಾಂಬು ಸಿಡಿಸುತ್ತಿದ್ದ ಕಿರಣ್ ಜೋಶಿ, ಸದಾ ಅಮಾಯಕನಾಗಿ ಗಡಿಬಿಡಿಯಲ್ಲಿರುತ್ತಿದ್ದ ಶಿವಪ್ರಸಾದ್ ಅವನ ಜೊತೆಗೆ ಅದೇ ದಾರಿಯಲ್ಲಿ ಬರುತ್ತಿದ್ದ ರಮೇಶ, ರಮೇಶನನ್ನು ಸದಾ ರೇಗಿಸುತ್ತಿದ್ದ ನನ್ನ ದೋಸ್ತ್ ದೀಕ್ಷಿತ್, .ನಾನು ಮೂರು ವರ್ಷ ಉಸಿರಾಡಿದ ಶಾರದ ಮಂಟಪ....... ಇನ್ನೂ ಇದೆ,

Friday, February 18, 2011

ನಾಳೆ ಬಾ ಮುಂದೆ ಹೋಗು

ನಾನಿನ್ನೂ ಚಿಕ್ಕವನು. ಸ್ಕೂಲಿನಿಂದ ಸೀಮೇಸುಣ್ಣ ಕದ್ದು ತಂದು ನಮ್ಮ ಮನೆಯ ಮುಂದಿನ ಬಾಗಿಲಿಗೆ ನಾಳೆ ಬಾ ಮುಂದೆ ಹೋಗು ಅಂತ ಬರೆದಿದ್ದೇ. ನಮ್ಮ ಊರಿನ ಹಾಗೂ ಅಕ್ಕಪಕ್ಕದ ಊರಿನ ಎಲ್ಲಾ ಮನೆಯ ಬಾಗಿಲಿನ ಈ ಬರಹ ಕಾಣುತ್ತಿತ್ತು. ಯಾಕೆ ಹೀಗೆ ಬರೆಯುತ್ತಾರೆ ಅಂತ ಯಾರನ್ನಾದರೂ ಕೇಳಿದರೆ, ರಾತ್ರಿ ಮನೆಯಲ್ಲಿ ಮಲಗಿದ್ದಾಗ ದೊಡ್ಡದೊಂದು ದೆವ್ವ ಬರುತ್ತೇ. ಬಂದು ಮನೆಯಲ್ಲಿ ಯಾರದಾದರೂ ಒಂದು ಹೆಸರನ್ನು ಹಿಡಿದು ಕೂಗುತ್ತೇ. ಅವರು ಆ ಅಂತ ಹೇಳಿದರೆ ಮುಗಿಯಿತು ಅಲ್ಲೇ ಸತ್ತು ಹೋಗುತ್ತಾರೆ ಅಂತ ಹೇಳಿದರು.

ಅದನ್ನು ತಪ್ಪಿಸಲು ಇರುವ ಒಂದೇ ಮಾರ್ಗ ನಾಳೆ ಬಾ ಮುಂದೆ ಹೋಗು. ಹೀಗೆ ಮನೆಯ ಮುಂದಿನ ಬಾಗಿಲಿನ ಮೇಲೆಯೋ ಅಥವಾ ಗೋಡೆಯ ಮೇಲೆಯೋ ಬರೆದರೆ ಅದು ನೋಡಿಕೊಂಡು ನಾಳೆ ಬಂದು ನೋಡಿಕೊಳ್ಳುತ್ತೇನೆ ಅಂತ ವಾಪಾಸು ಹೋಗುತ್ತೇ. ದಿನಾಲೂ ಇದೇ ಬರಹವನ್ನು ನೋಡಿ ಮುಂದೆ ಹೋಗುತ್ತದೆ ಎಂದರು ತಿಳಿದವರು. ಅದಕ್ಕೆ ಅಲ್ಲಿಂದ ಒಂದು ಚಾಪೀಸ್ ಕದ್ದು ತಂದು ನಮ್ಮ ಮನೆಯ ಬಾಗಿಲಿನ ಮೇಲೆ ಬರೆದಿದ್ದೇ.

ಮೊನ್ನೆ ರಾತ್ರಿ ಊರಿನ ಕೆಲ ಹುಡುಗರು ಒಟ್ಟಿಗೆ ಕುಳಿತು ಅದು ಇದು ಅಂತ ಹರಟೆ ಒಡೆಯುತ್ತಿದ್ದೆವು.  ಆ ಹರಟೆಯಲ್ಲಿ ಈ ನಾಳೆ ಬಾ ಮುಂದೆ ಹೋಗು ಬಂದು ಬಿದ್ದು ಬಿದ್ದು ನಕ್ಕಿದ್ದೆವು. ಯಾಕೆ ನಾವೆಲ್ಲಾ ಹಾಗೇ ಬರೆದೆವು ಎಂಬ ಚಿಂತನೆಗೆ ತೊಡಗಿದ ನಮ್ಮ ಯುವ ಪಡೆ, ಆಗ ಈಗಿನಂತೆ ಊರತುಂಬ ಕರೆಂಟಿರಲಿಲ್ಲ. ಅದರಿಂದ ಬೆಳಕಿರಲಿಲ್ಲ. ನಾವು ಈಗ ಕುಳಿತು ಮಾತಾಡುತ್ತಿರುವ ಈ ಸೇತುವೆ ಕಟ್ಟೆವರೆಗೂ ಆಗ ಬರುತ್ತಿರಲಿಲ್ಲ. ಇದು ಒಂದು.

ಮತ್ತೆ ಊರಿನಲ್ಲಿ ಯಾರಾದರೂ ಸತ್ತರೆ, ಅದರಲ್ಲೂ ಮದುವೆ ಆಗದವರು ಹೇಳಿ ಕೇಳಿ ವಯಸ್ಸಿಗೆ ಬಂದ ಹುಡುಗಿಯರು ಸತ್ತರೆ ಸತ್ತ ಮನೆಯ ಮುಂದು ಯಾರು ಸುಳಿಯುತ್ತಿರಲಿಲ್ಲ. ಆ ಕೇರಿಯ ಕಡೆಗೂ ನೋಡದೇ ಓಡಿ ಹೋಗುವ ಸ್ಥಿತಿಯದು. ನನ್ನ ಮನೆಯ ಮುಂದೆ ಹಾಳು ಬಿದ್ದ ತೋಟ. ಕತ್ತಲು ಕವಿದಿರುತ್ತಿತ್ತು. ಒಮ್ಮೊಮ್ಮೆ ಬಾರಿ ಧೈರ್ಯ ಬಂದಾಗ ಗಟ್ಟಿ ಮನಸ್ಸು ಮಾಡಿ ಆ ತೋಟದ ಕಡೆಗೆ ನೋಡುತ್ತಿದ್ದೇ.ಅಲ್ಲಿಂದ ಹೊರ ಹೊಮ್ಮುತ್ತಿದ್ದ ಗೋಬೆ ಸೇರಿದಂತೆ ಇತರೆ ಪಕ್ಷಿಗಳ ಕೂಗಾಟವನ್ನು ಕೇಳಿಯೇ ಗಡಗಡ ಶುರುವಾಗುತ್ತಿತ್ತು.

ದೆವ್ವದ ಕಥೆಗಳು ಕೇಳುವುದಕ್ಕಂತು ಬಲು ಇಷ್ಟ. ಆದರೆ ಕತ್ತಲೆಯಲ್ಲಿ ಒಬ್ಬನೇ ಇದ್ದಾಗ ಆ ಕಥೆಗಳು ನೆನಪಾಗುವುದು ನಿಶ್ಚಿತ. ಇದೇ ರೀತಿಯಲ್ಲಿ ನಮ್ಮೂರಿನ ಕೋಡಿಸರ ಎಂದಾಕ್ಷಣ ಅರ್ಧ ಜನ ದೂರ ಹೋಗಿಬಿಡುತ್ತಿದ್ದರು. ಕಾರಣ ಸತ್ತವರನ್ನೆಲ್ಲಾ ಅಲ್ಲಿಯೇ ಸುಡುತ್ತಿದ್ದುದು. ಅಲ್ಲಿ ದೆವ್ವಗಳ ನರ್ತನವಾಗುತ್ತದೆ ಎಂಬ ನಂಬಿಕೆ.

ಆದರೆ ಹಳ್ಳಿಗಳಲ್ಲೂ ಕ್ರಮೇಣ ಈ ಹೆದರಿಕೆ ಕಡಿಮೆಯಾಗುತ್ತಿದೆ. ಕಾರಣ ಮುಂದುವರೆದಂತೆ ಹೊಲಗಳಿಗೆ ನೀರಾವರಿ ಮಾಡಿಕೊಂಡು ರಾತ್ರಿಯ ವೇಳೆಯಲ್ಲೂ ಕರೆಂಟಿನ ಅಭಾವಕ್ಕೆ ಹೆದರಿ ನೀರಾಯಿಸುವ ನೆಪದಲ್ಲಿ ದೆವ್ವಗಳು ಮಾಯವಾಗಿವೆ. ಆದರೆ ಒಂದು ಅನುಮಾನ. ನಮ್ಮ ಹಿಂದಿನವರು ದೆವ್ವಗಳ ಕುರಿತಾಗಿ ವರ್ಣ ರಂಜಿತ ಕಥೆಗಳನ್ನು ಹೇಳುತ್ತಿದ್ದರು. ನಾನ ುದೆವ್ವವನ್ನು ನೋಡಿದ್ದೆ, ಹೆದರಿಸಿದ್ದೆ ಅಂತ ಹೇಳುವುದು ಸ್ಕೋಪ್ ಕಾರಣಕ್ಕಾಗಿಯೇನೋ ಎಂಬ ಅನುಮಾನ ಇತ್ತೀಚೆಗೆ ಕಾಡುತ್ತಿದೆ. 

ಊರ ಅನುಭವಗಳು ಇನ್ನು ಇವೆ ಮತ್ತೆ ಬರೆದುಕೊಳ್ಳುತ್ತೇನೆ.....

Sunday, December 19, 2010

ಅಮವಾಸ್ಯೆಯ ದಿನ ಅಮಾಯಕರಿಗೆ ಮದುವೆ ಮಾಡಿಸಿದ್ದು ಸಮರ್ಥನೆಯಾಗಿತ್ತು.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಇತ್ತೀಚೆಗೆ ಶಿವಮೊಗ್ಗದಲ್ಲಿ ಹೇಳಿದ ಒಂದು ಹೇಳಿಕೆ ಪತ್ರಕರ್ತರು ನಾಯಿಗಳು, ಅವರು ವಸೂಲಿ ವೀರರು ಎಂಬ ಮಾತುಗಳನ್ನು ಅವರಾಡಿದ್ದಾರೆ. ಆದರೆ ಈ ಮಾತುಗಳನ್ನು ಅವರು ಹೇಳುವಾಗ ಯಾವ ಉದ್ದೇಶದಿಂದ ಹೇಳಿದ್ದಾರೆ ಎಂಬುದು ಸ್ಪಸ್ಟವಾದರೆ ಮಾತ್ರ ಅವರ ಮಾತು ಹಾಗೂ ಹೇಳಿಕೆಯ ಹಿನ್ನೆಲೆ ಅರ್ಥವಾಗುತ್ತಿತ್ತು.

ಶರಣರು ಪತ್ರಕರ್ತರನ್ನು ನಾಯಿಗಳು ಎಂದು ಹೇಳಿದಾಕ್ಷಣ ಎಲ್ಲೆಡೆಯಿಂದಲೂ ಅವರನ್ನು ವಿರೋಧಿಸುವ ಕೆಲಸ ಆರಂಬವಾಯಿತು. ಆದರೆ ಯಾರು ಕೂಡಾ ಪಟ್ಟು ಹಿಡಿದು ಯಾರಿಗೆ ಈ ಮಾತನ್ನು ಹೇಳಿದ್ದೀರಿ..? ಯಾವ ಉದ್ದೇಶದಿಂದ ಹೇಳಿದ್ದೀರಿ ಎಂದು ಕೇಳಲಿಲ್ಲ. ಆದರೆ ಎಲ್ಲೋ ಒಂದು ಕಡೆ ಸಣ್ಣ ಸಂದೇಹ ಕಾಡುತ್ತದೆ. ಸ್ವಾಮೀಜಿ ಏನು ಮಾಡಿದರೂ ಅದು ಒಂದು ಕ್ರಾಂತಿಕಾರಿ ಹೆಜ್ಜೆ ಎಂಬಂತೆ ಬಿಂಬಿಸಿದ ಪತ್ರಕರ್ತರು ಇವತ್ತು ಅವರನ್ನೇ ವಿರೋಧಿಸುತ್ತಿದ್ದಾರೆಂದರೆ ಈ ಕ್ರಾಂತಿಕಾರಿ ಹೆಜ್ಜೆಯಿಡಲು, ಎಲ್ಲೆಲ್ಲೂ ಬಸವಣ್ಣನ ಇನ್ನೊಂದು ರೂಪ ಎಂದೆಲ್ಲಾ ಹೇಳಿಸಿಕೊಳ್ಳಲು ಶಿವಮೂರ್ತಿ ಶರಣರು ಎಷ್ಟು ಹಣ ಖರ್ಚು ಮಾಡಿರಬಹುದು...?

ಬಹಳ ಬಹಿರಂಗವಾಗಿ ಉಳಿದಿರುವ ಒಂದು ಸತ್ಯವೆಂದರೆ ಇತ್ತೀಚೆಗೆ ಮಾದ್ಯಮಗಳು ಪುಕ್ಸಟ್ಟೆ ಯಾರನ್ನೂ ಹೀರೋ ಮಾಡುವುದಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅವನು ದೇಶದ ದೊಡ್ಡ ಜನನಾಯಕನಾಗಿಬಿಡಬಹುದು ಅಂಥಹ ಒಂದು ಶಕ್ತಿ ಇಂದು ಮಾದ್ಯಮಗಳಿಗಿದೆ. ಅದು ಜನರೇ ಪಾಲಿಸಿದ್ದು. ಮಾದ್ಯಮಗಳು ಹೇಳಿದ್ದನ್ನೆಲ್ಲ ನಂಬಿದರೆ ಏನಾಗಬೇಕಿತ್ತೋ ಅದೇ ಆಗಿದೆ.

ಆದರೆ ಮುರುಘಾ ಶರಣರು ಯಾರಿಗೆ ಹಣ ಕೊಟ್ಟಿದ್ದಾರೆ ಎಂಬುದಷ್ಟೆ ಮುಖ್ಯ. ನಕ್ಸಲ್ ನಾಯಕ ಗದ್ದರ್ ಎಂಬ ವ್ಯಕ್ತಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟಾಗ ಇಡೀ ಸಮಾಜ, ಸ್ವತಃ ಸ್ವಾಮೀಜಿಯವರ ಸಮಾಜವಾದ ಲಿಂಗಾಯಿತರೆಲ್ಲಿ ಸಿಹಪಾಲು ಜನ ವಿರೋಧ ಮಾಡಿದ್ದರು. ಆದರೂ ಮಾದ್ಯಮಗಳು ಅವರನ್ನು ಸಮರ್ಥನೆ ಮಾಡಿಕೊಂಡಿದ್ದವು. ಜನರಿಗೆ ಒಪ್ಪಿಸಿದ್ದವು. ಅಮವಾಸ್ಯೆಯ ದಿನ ಅಮಾಯಕರಿಗೆ ಮದುವೆ ಮಾಡಿಸಿದರೂ ಅದನ್ನು ಮಾದ್ಯಮಗಳು ಸಮರ್ಥನೆ ಮಾಡಿಕೊಂಡಿದ್ದವು ಆದರೂ ಸ್ವಾಮೀಜಿ ಪತ್ರಕರ್ತರು ನಾಯಿಗಳು ಎಂದದ್ದು ಯಾಕೆ ಎಂಬುದಷ್ಟೇ ಇಲ್ಲಿ ಗಮನಿಸಬೇಕಾದ ಅಂಶ.

ಸ್ವಾಮೀಜಿ ಆ ಮಾತುಗಳನ್ನು ಹೇಳುವಾಗ ಅವರಲ್ಲಿ ಬೇಸರವಿತ್ತು. ಅವರ ಮಾತುಗಳು ಎಲ್ಲೋ ಒಂದು ಕಡೆ ಚಿತ್ರದುರ್ಗದ ಪತ್ರಕರ್ತರನ್ನೇ ಬೊಟ್ಟು ಮಾಡಿ ತೋರಿಸುತ್ತವೆ. ವಸೂಲಿ ಮಾಡಿರುವ ಪತ್ರಕರ್ತರಿರುವುದರಿಂದಲೇ ಈ ಮಾತುಗಳು ಅವರಿಂದ ಬಂದಿರುವುದು. ಸ್ವಾಮೀಜಿ ಏನು, ಯಾರು ಎಂಬ ಪೂರ್ವಾಪರಗಳನ್ನು ಬಿಟ್ಟು ಅವರನ್ನು ನಾಯಕರಾಗಿ ಬಿಂಬಿಸಿದ, ಹಾಗೂ ಅವರಿಂದ ವಸೂಲಿ ಮಾಡಿದವರು ಯಾರೆಂಬುದು ಸಮಾಜಕ್ಕೆ ಗೊತ್ತಾಗಬೇಕಿದೆ.

ಶಿವಮೂರ್ತಿ ಶರಣರು ಇನ್ನು ಒಂದು ಹೆಜ್ಜೆ ಮುಂದಿಟ್ಟು ನೇರವಾಗಿ ವಸೂಲಿ ಮಾಡಿಕೊಂಡಿರುವ ವೀರರನ್ನು ಬಹಿರಂಗಪಡಿಸಿಬಿಟ್ಟರೆ ಈಗ ಅವರ ಮೇಲೆ ಮುನಿಸಿಕೊಂಡಿರುವ ಪತ್ರಕರ್ತರು ಸರಿಯಾಗಬುದೇನೊ ಎಂಬ ಭಾವನೆಯಿದೆ. ಸ್ವಾಮೀಜಿ ಧೈರ್ಯ ಮಾಡುವಿರಾ...

Sunday, December 12, 2010

ಬೋರಾಗುತ್ತಿದೆ.....ಮುಂದಕ್ಕೆ ಹೋಗಲು ಸಿದ್ಧನಾಗುತ್ತಿದ್ದೇನೆ

ಇಲ್ಲಿ ಯಾವೂದನ್ನು ಉಳಿಸಿಕೊಳ್ಳಲಿಕ್ಕಾಗುವುದಿಲ್ಲ. ಶಾಶ್ವತವಾಗಿ ಎಂಬುದು ಒತ್ತಟ್ಟಿಗಿರಲಿ ಸರಿಯಾಗಿಯೂ ಉಳಿಸಿಕೊಳ್ಳಲಿಕ್ಕಾಗುವುದಿಲ್ಲ. ಒಂದು ಸಿಕ್ಕಿ ನಿಟ್ಟುಸಿರು ಬಿಡುವಷ್ಟರಲ್ಲಿ ಇನ್ನೊಂದು ಸ್ಪರ್ಧೆ ಆರಂಭವಾಗಿಬಿಟ್ಟಿರುತ್ತದೆ. ಜೀವನ ಒಂದು ನಿರಂತರವಾದ ರೇಸ್. ಓಡಿ ಓಡಿ ಸಾಕಾಗುತ್ತದೆ. ನೆಮ್ಮದಿಯಾಗಿ ಒಂದು ಕಡೆ ಇದ್ದುಬಿಡೋಣವೆಂದರೆ ಮನಸ್ಸೆಂಬುದು ತನಗೆ ಬೇಕಾದಂತೆ ಆಟವಾಡಿಸಿಬಿಡುತ್ತದೆ.


ಬೆಳೆಗ್ಗೆ ಇನ್ನೂ ಯಾವೂದಕ್ಕೂ ತಲೆಯನ್ನೇ ಕೊಡಬಾರದು ಎಂದು ಹೇಳುವ ಮನಸ್ಸು ಸಂಜೆಯ ಹೊತ್ತಿಗೆ ಒಳಗಿನಿಂದಲೇ ಕ್ರಾಂತಿ ಆರಂಭಿಸಿಬಿಡುತ್ತದೆ. ಬೆಳೆಗ್ಗೆಯೋ ಅಥವಾ ಸಂಜೆಯೋ ಒಂದು ನಿರ್ಧಾರವನ್ನು ತೆಗೆದುಕೊಂಡರೆ ಅದು ಮರು ಕ್ಷಣ ಸವಕಲಾಗಿಬಿಡುತ್ತದೆ. ಯಾರೋ ಒಬ್ಬರು ಆದರ್ಶಗಳಿಗಾಗಿ ಸತ್ತರು ನಾನ್ಯಾಕೆ ಹಾಗೇ ಸಾಯಬೇಕು. ಅವರು ಮಾಡಿದಂತೆಯೇ ನಾನ್ಯಾಕೆ ಮಾಡಬೇಕು ಎಂಬ ಸಣ್ಣ ಹಠ.

ಇಂದಿನ ದಿನಗಳಲ್ಲಿ ಆದರ್ಶಗಳೇನಿದ್ದರೂ ಹೇಳುವುದಕ್ಕೂ ಕೇಳುವುದಕ್ಕೂ ಹಾಗೂ ಹೊಗಳಲಿಕ್ಕೂ ಚೆಂದ. ಆಚರಣೆಗಲ್ಲ. ಆದರ್ಶಕ್ಕಾಗಿ ಬದುಕಿದರೆ ಜೀವನ ಪೂರ್ತಿಯಾಗಿ ಹೀಗೆ ಒದ್ದಾಡುತ್ತಿರಬೇಕು. ಆದರೆ ಒಂದೇ ಒಂದು ಸಾರಿಟಡ್ಡದಾರಿ ತುಳಿದುಬಿಟ್ಟರೆ ನಾನು ಜನನಾಯಕನಾಗಿಬಿಡುತ್ತೇನೆ. ಹಾಗೂ ಅವತ್ತು ಅಡ್ಡದಾರಿಯಲ್ಲಿ ಹೋದವರೆ ಸಮಾಜಕ್ಕೆ ಮಾರ್ಗದರ್ಶನ ಮಾಡಲು ನಿಂತಿರುವವರು. ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ಇನ್ನೊಬ್ಬರಿಗಿ ನ್ಯಾಯ, ಧರ್ಮ ಹೇಳಲು ನಿಂತಿರುತ್ತಾರೆ. ಈ ಸ್ಥಿತಿಗೆ ಬರುವುದಕ್ಕೆ ನೀನು ಮಾಡಿದ ಕೆಲಸ ಹೇಳಪ್ಪ ಎಂದು ಕೇಳುವ ಮನಸ್ಸು ಕೂಡಾ ಬರುವುದಿಲ್ಲ. ಕಾರಣ ಆ ಕ್ಷಣಕ್ಕೆ ನಾನೂ ಕೂಡಾ ಅವನ ಬಳಿ ಒಳ್ಳೆಯವನಾಗಿಬಿಡಬೇಕು. ನಾಲ್ಕು ಜನರ ಎದುರು ಅವನ ಕೈ ನನ್ನ ಹೆಗಲ ಮೇಲಿರಬೇಕು.


ಮರುಕ್ಷಣ ಭ್ರಷ್ಠ ಅಂಥವನ ಕೈ ನನ್ನ ಹೆಗಲ ಮೇಲಿಟ್ಟುಕೊಂಡು ಓಡಾಡಿದರೆ ಆ ಕಳಂಕ ನನ್ನ ತಲೆಗೆಲ್ಲಿ ಅಂಟುವುದೆಂಬ ಭಯ.


ಆದರೆ ಒಂದೇ ಒಂದು ಉದಾಹರಣೆಯನ್ನು ಕೇಳಿದಾಕ್ಷಣ ನಾನು ಯಾಕೆ ಅವರಂತಾಗಬಾರದು. ಇಂಥಹ ಬಾಬು ತುಂಬ ಪ್ರಾಮಾಣಿಕ ಪತ್ರಕರ್ತ ಎಂದು ಯಾರೋ ಒಬ್ಬ ಮೂರನೇ ವ್ಯಕ್ತಿ ಹೇಳಿದಾಗ, ಛೇ ಎಷ್ಟು ಹಣವಿದ್ದರು ಜನರ ಬಾಯಲ್ಲಿ ಕೇವಲವಾಗುವುದಕ್ಕಿಂತ ಹೀಗೆ ನನ್ನ ಕಣ್ಣಿಗೆ ಕಾಣದ ವ್ಯಕ್ತಿಯೊಬ್ಬನಿಂದ ನಾನು ಸಾಚಾ ಎಂದು ಹೇಳಿಕೊಳ್ಲುವುದರಲ್ಲಿ ಎಷ್ಟು ಹಿತವಿದೆ. ಆದರೆ ಸಮಸ್ಯೆ ಎದುರಾದಾಗ ನನ್ನ ಒಳ್ಳೆಯತನ ಸಹಾಯಕ್ಕೆ ಬಾರದಿದ್ದರೆ ಸಾಚಾ ಆಗಿ ಯಾರಿಗೆ ಏನಾಗಬೇಕಿದೆ. ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ ನನಗೇನು
 ಎಂಬ ಭಾವನೆ ಮನಸ್ಸಿನಲ್ಲಿ ಬಂದಾಗ ಮತ್ತೊಮ್ಮೆ ಯೋಚನೆಗಳು ತಲೆಕೆಳಗು.


ಹೀಗೆ ಮನಸ್ಸು ಎಲ್ಲೆಲ್ಲೊ ಅಟ್ಟಾಡಿಸಿಕೊಂಡು ಬರುತ್ತದೆ.

ಬೆಂಗಳೂರಿನಲ್ಲಿರುವ ತನಕ ಬೆಂಗಳೂರು ಬೇಡ. ಅಲ್ಲಿಂದ ಹೊರ ಬಂದು ಇಲ್ಲಿ ಏನು ಇಲ್ಲ ಅದಾಗ ಅದೇ ಚೆನ್ನಾಗಿತ್ತು. ಯಾವಾಗಲೂ ಎಲ್ಲಾ ಕ್ಷಣಗಳು ಎಣಿಕೆಯಂತೆ ಇರುವುದೇ ಇಲ್ಲ. ಅಯೋಮಯ. ಅಲ್ಲಿದ್ದಾಗ ಅವರು ನನ್ನನ್ನು ಶತ್ರು ತರ ನೋಡುತ್ತಾರೆ. ಇಲ್ಲಿಗೆ ಬಂದ ನಂತರ ಅವರು ಅಷ್ಟು ಬೈದದ್ದು ನನ್ನ ಹಿತಕ್ಕಾಗೇ. ಕಾರಣ ಅರಿಂದ ಬೈಸಿಕೊಂಡು ಒಳ್ಳೆಯವಾರಗಿ ಬದುಕುವವರನ್ನು ನೋಡಿದೆ. ದುರ್ಗಾ ಬೋರಾಗುತ್ತಿದೆ. ಅದಕ್ಕೆ ಹೀಗೆ.... ಮುಂದಕ್ಕೆ ಹೋಗುವ ಹಂಬಲ ಸಿದ್ಧನಾಗುತ್ತಿದ್ದೇನೆ...

Sunday, November 28, 2010

ಕಳ್ಳರ ಸಂತೆ ಅದರಲ್ಲಿ ಕುಮಾರಸ್ವಾಮಿಯದ್ದು ಒಂದು ಅಂಗಡಿ ಇದೆ

ಛೀ... ಥೂ...


        ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕ್ಕಿಂತ ದೊಡ್ಡ ಉದಾಹರಣೆ ಭಾರತದಲ್ಲಿ ಇನ್ನಲ್ಳೂ ಸಿಗಲಿಕ್ಕಿಲ್ಲ. ದುರ್ಬೀನು ಹಾಕಿ ಹುಡುಕಿದರೂ ಪ್ರಾಮಾಣಿಕರು ಸಿಗುವುದು ಅಪರೂಪವಾಗಿಬಿಟ್ಟದೆ. ಪ್ರಾಮಾಣಿಕರಿದ್ದರೂ ಈ ರಾಜಕೀಯ ನೋಡಿ ಸಪ್ಪಗಾಗಿ ಬಿಟ್ಟಿದ್ದಾರೆ. ಯಡಿಯೂರಪ್ಪನವರನ್ನು ಇಲ್ಲಿವರೆಗೇ ಕರ್ನಾಟಕದ ಜನತೆ ಬಹಳ ದೊಡ್ಡ ಮನುಷ್ಯ, ಹೋರಾಟಗಾರ ಹೀಗೆ ಇನ್ನೂ ಏನೇನೊ ತಿಳಿದುಕೊಂಡಿದ್ದರು. ಕಾರಣ ಅವರು ಬೆಳೆದು ಬಂದ ದಾರಿ.

  ಯಡಿಯೂರಪ್ಪ ಒಬ್ಬ ಮಾತ್ರ ಕಳ್ಳನಾಗಲಿಲ್ಲ ಬೆನ್ನಿಗಿದ್ದ ಸಂಘಟನೆಗೂ ಕೆಟ್ಟ ಹೆಸರು ತಂದಿಟ್ಟು ಇಂದು ಎಲ್ಲೂ ಸಂಘದ ಕಾರ್ಯಕರ್ತರು ಮಾತನಾಡದಂತಹ ಸ್ಥಿತಿಗೆ ತಂದಿಟ್ಟಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ಮಾಡಿದ್ದಕ್ಕೂ ಸಂಘಕ್ಕೂ ಸಂಬಂಧ ಏನು ಎಂದು ಪ್ರಶ್ನಿಸಬಹುದು. ಆದರೆ ನಿಮ್ಮ ಬಿಜೆಪಿ ಈ ಹಂತಕ್ಕೆ ಬರಲು ಕಾರಣ ಸಂಘದ ಕಾರ್ಯಕರ್ತರು ಹಳ್ಳಿಗೆ ಹೋಗಿ ದೇಶಭಕ್ತರ ಕಥೆಗಳನ್ನು ಹೇಳಿ ಜನರಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ತುಂಬಿಸಿ ಅವರನ್ನು ದೇಶಕ್ಕಾಗಿ ಬದುಕುವಂತೆ ಮಾಡುತ್ತಿರುವಾಗ ನಿಮ್ಮ ಬಿಜೆಪಿ ನಾವೇ ದೇಶ ಕಾಯುವವರು ಎಂದು ಪೋಸು ಕೊಟ್ಟುಕೊಂಡು ಸಂಘದವರು ನಿರ್ಮಿಸಿದ್ದ ವಾತವರಣವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ.

  ರಾಜಕೀಯದಲ್ಲಿ ಇರುವವರೆಲ್ಲರೂ ಕಳ್ಳರೇ ಎಂದು ಈಗ ಯಾರು ಬೇಕಾದರೂ ಘಂಟಾಘೋಷವಾಗಿ ಸಾರಬಹುದು. ಕಾರಣ ಬಿಜೆಪಿಯವರ ಭಯವಿಲ್ಲ. ಕಳ್ಳರ ಸಂತತಿಯೇ ಬಿಜೆಪಿ ಆಗಿದೆ. ಆಪರೇಷನ್ ಕಮಲದಿಂದ ಹಿಡಿದು ಈ ವರೆಗೆ ರಾಜ್ಯಕ್ಕೆ ಅನೇಕ ಹೊಸತನಗಳನ್ನು ತಂದ ಕೀರ್ತಿ ಮತ್ತು ಕಳಂಕ ಬಿಜೆಪಿಗೆ ಸೇರುತ್ತದೆ. ಕಾಂಗ್ರೇಸ್ ಹಾಗೂ ಜೆಡಿಎಸ್ ಅಥವಾ ಇನ್ಯಾವುದೇ ಪಕ್ಷಗಳು ದೇಶವನ್ನು ಇಷ್ಟು ವರ್ಷ ಆಳಿವೆ. ದೇಶವನ್ನು ಲೂಟಿ ಮಾಡಿವೆ ಎಂದು ಹೇಳಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಮುಕ್ಕಾಲು ಪಾಲು ಬಿಜೆಪಿಯವರು ಮಾಡಿದ್ದೇನು. ಇವತ್ತು ರಾಜ್ಯದ ಜನತೆ ನಿಮಗೆ ಮೇಲೆ ಮೊದಲಿಗೆ ಹೇಳಿದ ಹಾಗೇ ಛೀ.. ಥೂ ಎನ್ನುತ್ತಿದ್ದಾರೆ.

  ಕಳೆದ ಎರಡುವರೆ ವರ್ಷ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳೂ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಜನ ನಿಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಮಾತು ಮಾತಿಗೂ ಭಾರತ ಮಾತೆ, ದೇಶಭಕ್ತರು ಅಂಥ ಹೇಳಿಕೊಂಡು ಇಂದು ದೇಶವನ್ನೇ ಮಾರುವ ಸ್ಥಿತಿಗೆ ಬಂದು ನಿಂತಿದ್ದಾರೆ ಬಿಜೆಪಿಯವರು. ಕಾರಣ ದೇಶಭಕ್ತರು ಬಿಜೆಪಿಯವರು ಮಾತ್ರ ಆದ್ದರಿಂದ ಆ ದೇಶವನ್ನು ಅವರೇ ಮಾರಿಕೊಳ್ಳಬಹುದು  ಎಂಬ ಭ್ರಮೆ.

  ನಾಡಿನ ಮುಖ್ಯಮಂತ್ರಿಗಳಿಂದ ಹಿಡಿದು ಒಬ್ಬ ಜಿಲ್ಲಾಧ್ಯಕ್ಷನವರೆಗೆ ಎಲ್ಲರೂ ದೋಚುತ್ತಿದ್ದಾರೆ. ನಿನ್ನೆ ಮೊನ್ನೆ ಏನು ಇರಲಿಲ್ಲ. ಅವನು ಸಿಕ್ಕಬಟ್ಟೆ ಪ್ರಾಮಾಣಿಕ. ಆದರೆ ಈಗ ಐಷಾರಾಮಿ ಕಾರಿದೆ ಹಿಂದೆ ಮುಂದೆ ಜನರಿದ್ದಾರೆ. ಏನಿದು ಹೇಗೆ ಸಾದ್ಯ. ನಿಮ್ಮ ಬಗ್ಗೆ ಜನ ಏನು ತಿಳಿದುಕೊಳ್ಳಬಹುದು ಯೋಚಿಸಿದ್ದೀರಾ. ನೀವು ಮಾತ್ರ ಇಷ್ಟೆಲ್ಲಾ ಮಾಡಲು ರಾಜ್ಯದ ಜನರೇನು ನಿಮಗೆ ಈ ರಾಜ್ಯವನ್ನು ಮಾರಿದ್ದಾರೆ ಎಂದುಕೊಂಡಿದ್ದೀರಾ.

  ಭ್ರಷ್ಟಾಚಾರದ ಕರ್ಮಕಾಂಡದಲ್ಲಿ ಮುಳುಗಿದ್ದ ಯಡಿಯೂರಪ್ಪನವರ ಬಗ್ಗೆ ಆರೋಪಗಳು ಕೇಳಿ ಬಂದ ತಕ್ಷಣ ರಾಜಿನಾಮೆ ಕೊಟ್ಟು ಬಂದಿದ್ದರೆ ಯಡಿಯೂರಪ್ಪ ಗ್ರೇಟ್ ಆಗಿ ಬಿಡುತ್ತಿದ್ದರು. ಆದರೆ ಇಲ್ಲಿವರೆಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ  ಸಿ.ಎಂ. ಕುರ್ಚಿಯನ್ನು ಬಿಡದಂತೆ ಹಿಡಿದುಕೊಂಡಿರುವ ಅಥವಾ ಕಾಲು ಹಿಡಿದು ಎಳೆದರೂ ಬಿಡದಂತೆ ಅಡ್ಡ ಬಿದ್ದು ಹಿಡಿದಿರುವ ಕಾರ್ಟೂನ್ ನಿಮ್ಮ ವರ್ತನೆಗಳನ್ನು ನೂರಕ್ಕೆ ನೂರು ಬಿಂಬಿಸುತ್ತಿತ್ತು.

  ಇನ್ನೂ ಏನೇ ಮಾಡದರೂ ಈ ಹಿಂದೆ ಜನರಿಗೋಸ್ಕರವಾಗಿ ಇದ್ದ ಯಡಿಯೂರಪ್ಪ, ರೈತರಿಗಾಗಿ ಇದ್ದ ಯಡಿಯೂರಪ್ಪ, ಅವರಿಗಾಗಿಯೇ ಸೈಕಲ್ ಮೇಲೆ ಇಡೀ ಶಿಖಾರಿಪುರ ತಾಲೂಕನ್ನು ಸುತ್ತಿದ ಯಡಿಯೂರಪ್ಪ ಸತ್ತು ಹೋಗಿದ್ದಾರೆ. ಈಗೇನಿದ್ದರು ಸ್ವಜನ ಪಕ್ಷಪಾತಿ, ಅಧಿಕಾರದ ಅಮಲು ಏರಿರುವ, ಭಗಳ್ಳ ಯಡಿಯೂರಪ್ಪ ಮಾತ್ರ ಮುಖ್ಯಮಂತ್ರಿಯಾಗಿರುವುದು.

 ಕುಮಾರ ಸ್ವಾಮಿ ಬಾರಿ ಸಾಚಾ ಮನುಷ್ಯನೇ

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏನು ಸಾಚಾ ಅಂತ ನಾನಿಲ್ಲಿ ಇಷ್ಟರವರೆಗೆ ಯಡಿಯೂರಪ್ಪನವರನ್ನು ಬೈಯಲಿಲ್ಲ. ಕಳ್ಳರ ಸಂತೆ ಅದರಲ್ಲಿ ಕುಮಾರಸ್ವಾಮಿಯದ್ದು ಒಂದು ಅಂಗಡಿ ಇದೆ. ಮಾದ್ಯಮಗಳನ್ನೇ ಖರೀಧಿ ಮಾಡಿಕೊಂಡು ಯಡಿಯೂರಪ್ಪನವರ ವಿರುದ್ದ ತಿರುಗಿಬಿದ್ದು ಬಾರಿ ಸಾಧನೆ ಮಾಡಿದಂತೆ ಪ್ರತಿ ದಿನ ಟಿ.ವಿ ಹಾಗೂ ಪತ್ರಿಕೆಗಳಲ್ಲಿ ರಾಜ್ಯದ ಉದ್ದಾರಕ್ಕಾಗಿಯೇ ಅವತಾರವೆತ್ತಿ ಬಂದವರಂತೆ ಪೋಸು ಕೊಡುತ್ತಾ ಮುಖ ಗಂಟಿಕ್ಕಿಕೊಂಡು ಮಾತನಾಡುವುದು ಹೇಸಿಗೆಯಾಗುತ್ತದೆ.

  ಯಾರೋ ಒಬ್ಬ ಪ್ರಾಮಾಣಿಕ ಯಡಿಯೂರಪ್ಪನವರ ಬಗ್ಗೆ ಇಷ್ಟೆಲ್ಲಾ ಆರೋಪಗಳನ್ನು ಮಾಡಿದ್ದರೆ ಅದನ್ನು ಒಪ್ಪಬಹುದು. ಆದರೆ, ತಾನು ಮಾಡಿರುವುದನ್ನೇ ಇನ್ನೊಬ್ಬ ಮಾಡಿದ್ದಾನೆ ಅದನ್ನೇ ನಾನು ಮಾಡಿಯೇ ಇಲ್ಲ ಎನ್ನುವಂತೆ ಮಾತಾಡಿದ ತಕ್ಷಣ ಜನ ನಂಬುತ್ತಾರೆ ಎಂದುಕೊಂಡಿದ್ದಿರಾ..

  ಜನ ಈಗಾಗಲೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಭೂ ಹಗರಣ ಬಹಳ ಹಿಂದಿನಿಂದಲೂ ಆಗಿದೆ. ಆದರೆ ಈ ತನಕ ಯಾಕೆ ಇದು ಇಷ್ಟು ಸುದ್ದಿಯಾಗಲಿಲ್ಲ. ಕುಮಾರಸ್ವಾಮಿಯವರಿಗೆ ಮಾತ್ರ ಈ ವಿಷಯ ಗೊತ್ತಾದದ್ದು ಹೇಗೆ. ಆದರೆ ಜನ ಬುದ್ದಿವಂತರು ಕಳ್ಳರ ದಾರಿ ಕಳ್ಳರಿಗೆ ಮಾತ್ರ ಗೊತ್ತಿರುತ್ತದೆ. ಯಡಿಯೂರಪ್ಪ ಇಲ್ಲಿ ಹೀಗೆ ಮಾಡಿದ್ದಾರೆ ಎಂದು ನೀವು ಮಾಡಿದ್ದಕ್ಕೆ ತಾನೇ ಗೊತ್ತಾಗಿದ್ದು.

  ಒಟ್ಟಾರೆಯಾಗಿ ರಾಜಕೀಯ ಹೊಲಸು ಎಂದು ಈಗ ಅಧಿಕೃತವಾಗಿ ಗೊತ್ತಾಗಿದೆ. ಅದಕ್ಕೆ ಜನರೆಲ್ಲಾ ಸೇರಿ ಛೀ.. ಥೂ ಎನ್ನುತ್ತಿದ್ದಾರೆ. ಅದು ನಿಮ್ಮೆಲ್ಲರ ಮುಖದ ಮೇಲಿದೆ. ಹೊರೆಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡಿ.


{ಮನವಿ: ಈ ಬರಹದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಭ್ರಮನಿರಸನಗೊಂಡು ಬರೆದ ಬಿಸಿಯಿದೆ. ರಾಜಕಾರಣಿಗಳೆಲ್ಲರೂ ಕೆಟ್ಟವರೆಂಬುದು ನನ್ನ ವಾದವಲ್ಲ. ಹಾಗೇಯೇ ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕರಿದ್ದಾರೆ ಅದು ನನಗೆ ಗೊತ್ತಿದೆ. ಆದರೆ ಇಲ್ಲಿವರೆಗೆ ನಾಯಕರೆನಿಸಿಕೊಂಡವರೇ ಹೀಗೆ ಮಾಡಿದಾಗ ಪ್ರಾಮಾಣಿಕರಿಗೆ ಬೆಲೆ ಕಡಿಮೆಯಾಗುತ್ತದೆ. ಈ ಬರಹದಿಂದ ಪ್ರಾಮಾಣಿಕರಿಗೆ ಯಾವ ತಪ್ಪು ಮಾಡದವರಿಗ ನೋವಾಗುವ ಸಂದರ್ಭ ಬಂದರೆ ಅದಕ್ಕೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.}

Saturday, October 2, 2010

ದೇಶದ ಜನರು ಗೆದ್ದರು, ಅಲಹಬಾದ್ ಹೈಕೋರ್ಟ್ ಕೂಡಾ ಗೆದ್ದು ಬಿಟ್ಟಿತು

ಅಲಹಬಾದ್ ಹೈಕೋರ್ಟ್ ಕೊನೆಗೂ ಗೆದ್ದು ಬಿಟ್ಟಿತು.

 ಹಿಂದು ಹಾಗೂ ಮುಸ್ಲಿಂ ಇಬ್ಬರ ನಡುವೆ ಯಾರ ಕಡೆಗೆ ಅಯೋಧ್ಯೆ ಒಲಿಯುತ್ತದೆ ಎಂಬ ಕುತೂಹಲ ಬಾಬ್ರಿ ಮಸೀದಿ ನೆಲಸಮವಾದ ದಿನದಿಂದ ಎಲ್ಲರ ತಲೆಯಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿತ್ತು.

ಆದರೆ ಆಗಿದ್ದೇ ಬೇರೆ. ಇಲ್ಲಿ ಯಾರು ಗೆಲ್ಲಲಿಲ್ಲ, ಅಲಹಬಾದ್ ಹೈಕೋರ್ಟ್ ಗೆದ್ದು ಬಿಟ್ಟಿತು. ಇಡೀ ದೇಶದ ಜನ ಈ ತೀರ್ಪನ್ನು ಮೆಚ್ಚಿದ್ದಾರೆ. ಅಯೋಧ್ಯೆಯನ್ನು ಬಹುವಾಗಿ ಅಚ್ಚಿಕೊಂಡಿದ್ದ ಜನರಲ್ಲಿ ಇತ್ತೀಚೆಗೆ ಬಂದಿದ್ದ ಭೋಪಾಲ್ ದುರಂತದ ತೀರ್ಪನ್ನು ನೋಡಿ ಎಲ್ಲೊ ಒಂದು ಕಡೆ ಆತಂಕವಿತ್ತು.

ಇದಷ್ಟೇ ಅಲ್ಲದೇ ಇಡೀ ದೇಶದಲ್ಲಿ ತೀರ್ಪು ಬಂದ ಮರು ಕ್ಷಣದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಸಾವಿರಾರು ಜನರ ಮಾರಣ ಹೋಮ ನಡೆಯುತ್ತದೆ ಎಂಬ ಭಯಂಕರವಾದ ಭಯವಿತ್ತು. ಆದರೆ ಅದೇನು ನಡೆಯಲಿಲ್ಲ. ಕೆಲವರಂತು ಇನ್ನು 15 ದಿನಗಳ ಕಾಲ ಬಂದ್ ಆಗುತ್ತದೆ ಬೈಕಿಗೆ ಪೆಟ್ರೋಲ್ ತುಂಬಿಸಿಕೊಳ್ಳಬೇಕು. ಮೊಬೈಲ್ಗೆ ಕರೆನ್ಸಿ ಹಾಕಿಸಬೇಕು ಎಂದು ಓಡಾಡಿ ಎಲ್ಲದಕ್ಕೂ ರೆಡಿಯಾಗಿದ್ದ ಘಟನೆಯನ್ನು ನೋಡಿದವರಲ್ಲು ಗಾಬರಿ ಮನೆ ಮಾಡುತ್ತಿತ್ತು.

ದೇಶದ ಜನ ಗೆದ್ದಿದ್ದಾರೆ,ತೀರ್ಪನ್ನು ಮೆಚ್ಚಿದ್ದಾರೆ. ಆದರೆ ಸುನ್ನಿ ವಕ್ಫ್ ಬೋರ್ಡ್ ಇದನ್ನು ಒಪ್ಪಿಕೊಳ್ಳಬೇಕಿತ್ತು. ಕಾರಣ ಒಂದು ಕೋರ್ಟ್ ಶ್ರೀರಾಮ ಅಯೋಧ್ಯೆಯಲ್ಲಿದ್ದಿದ್ದು ನಿಜ. ಅವನು ಅಲ್ಲಿ  ಹುಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದೆ. ಆದರೂ ಇವರು ಮುಂದುವರೆದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತದೆ.

ಅವರು ಮುಂದುವರೆದಿದ್ದನ್ನು ನೋಡಿ ಹಿಂದೂ ಮಹಾ ಸಭಾ ಕೂಡಾ ಈಗ ಮೂರನೇ ಒಂದು ಭಾಗ ಕೊಟ್ಟಿರುವುದನ್ನು ವಿರೋಧಿಸಿ ಸುಪ್ರೀಂ ಮೆಟ್ಟಲೇರಲು ಹೊರಟಿರುವುದು ಗಮನಿಸಬೇಕಾದ ಅಂಶ. ಇಲ್ಲಿ ಕೋರ್ಟ್ ಕೂಡಾ ದೇಶದಲ್ಲಿ ಹಿಂಸಾಚಾರ ಸಂಭವಿಸುವುದು ಬೇಡ ಮತ್ತು ಅವರಿಗೆ ಬೇಸರವಾಗುವುದು ಬೇಡ ಉದ್ದೇಶದಿಂದ ಸುನ್ನಿ ವಕ್ಫ್ ಬೋರ್ಡ್ ಗೆ ಭಾಗ ಕೊಟ್ಟಿದೆ ಎಂಬ ಮಾತುಗಳು ಜನ ಸಾಮಾನ್ಯರ ನಡುವುನಿಂದ ಕೇಳಿ ಬರುತ್ತಿವೆ.

ಕೊನೆಯದಾಗಿ ಕರುಣಾನಿಧಿ ನೆನಪಿಗೆ ಬರುತ್ತಾರೆ. ಕಾರಣ ಈ ಹಿಂದೆ ರಾಮಸೇತು ವಿವಾದವಾಗಿದ್ದಾಗ ರಾಮ ಇದ್ದಿದ್ದು ಸುಳ್ಳು, ಅವನು ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಎಂಬ ಅವರಷ್ಟೇ ತೂಕದ ಪ್ರಶ್ನೆ ಎತ್ತಿದ್ದರು. ಈಗ ಅಲಹಬಾದ್ ಹೈಕೋರ್ಟ್ ಸರಿಯಾದ ಉತ್ತರ ಕೊಟ್ಟದೆ.

Tuesday, September 28, 2010

ಮಳೆ ಬಂದು ನದಿಗಳಾದ ಚರಂಡಿಗಳಲ್ಲಿ ಈಜಿದ ನೆನಪು


ಮಳೆಯ ಅಬ್ಬರಕ್ಕೆ ಮುಂದಿನ ರಸ್ತೆ ಕಾಣುತ್ತಿಲ್ಲ. ಎದುರಿನಿಂದ ಬಂದು ಕಪಾಳಕ್ಕೆ ಯಾರೋ ಒಡೆದಂತಹ ಅನುಭವ. ಚಿತ್ರದುರ್ಗದಿಂದ ಹೊಸದುರ್ಗಕ್ಕೆ ಹೋಗುವಷ್ಟರಲ್ಲಿ ಮುಖ ಕೆಂಪಾಗಾಗಿತ್ತು. ಹೊರಡುವಾಗ ಕಾಣದ ಮಳೆ ಹೋಗುವ ಮಧ್ಯೆ ಶುರು ಆಗಿಬಿಟ್ಟಿತು. ಮಳೆಯಿಂದ ತಪ್ಪಿಸಿಕೊಳ್ಳಲು ಈ ಮೊದಲಿದ್ದ ರಸ್ತೆ ಬದಿಯ ಮರಗಳು ಈಗ ಕಾಣೆಯಾಗಿವೆ.
ಒದ್ದೆಯಾಗುವುದು ಅನಿವಾರ್ಯವಾಗಿಬಿಟ್ಟಿತ್ತು. ಒಂದು ಕಡೆಯಿಂದ ಭಯ. ಎದುರಿನಿಂದ ಬಂದವನಿಗೆ ನನ್ನ ಬೈಕ್ ಕಾಣದೆ ಹೊಡೆದು ಬಿಟ್ಟರೆ ಈ ಮಳೆಯ ನೀರಿನಲ್ಲಿ ನನ್ನ ರಕ್ತವು ಕಾಣುವುದಿಲ್ಲ ಎಂಬ ಅನೇಕ ಯೋಚನೆಗಳು ಅಬ್ಬರದ ಮಳೆಯಲ್ಲೂ ನನ್ನ ತಲೆ ತುಂಬ ಗಿರಕಿ ಹೊಡೆಯುತ್ತಿದ್ದವು.
ಹೋಗುವುದು ಅನಿವಾರ್ಯವಾಗಿತ್ತು. ಏನು ಬೇಕಾದರೂ ಆಗಲಿ ಅಂದುಕೊಂಡು ಹೋಗುತ್ತಲೇ ಇದ್ದೆ. ಶಿವಗಂಗದಿಂದ ಎಡಕ್ಕೆ ತಿರುಗಿ ಹೊಸದೊಂದು ದಾರಿಯಲ್ಲಿ ಹೊಸದುರ್ಗದ ಕಡೆ ಹೊರಟೆ.
ಹೊಸದರ್ಗದವರೆಗೆ ಸಿಗುವ ಎಲ್ಲವೂ ಹಳ್ಳಿಗಳೆ. ಮಳೆ ಮತ್ತು ಹಳ್ಳಿಗಳ ಜನರು ಆ ಮಳೆಯಲ್ಲೂ ರಸ್ತೆಯಲ್ಲಿ ಏನೇನೊ ಕೆಲಸದಲ್ಲಿ ತೊಡಗಿರುವುದನ್ನು ನೋಡಿ ನೆನಪುಗಳು ಮೆರವಣಿಗೆ ಹೊರಟು ಬಿಟ್ಟವು.
ಮಳೆ ಬಂದು ನಿಂತರೆ ಸಾಕು ಊರ ಸುತ್ತಮುತ್ತಾ ಎಲ್ಲೆಲ್ಲಿ ದೊಡ್ಡ ದೊಡ್ಡ ಗುಂಡಿಗಳಿರುತ್ತವೊ ಅವೆಲ್ಲವನ್ನೂ ಒಮ್ಮೆ ಓಡೋಡಿ ನೋಡಿ ಬರಬೇಕು. ನೋಡದಿದ್ದರೆ ಏನೋ ಕಳೆದುಕೊಳ್ಳುವ ತವಕ. ಮನೆಯಲ್ಲಿ ಗೊತ್ತಾಗದ ಹಾಗೇ ಅಲ್ಲಿಯೆ ಬಟ್ಟೆ ಬಿಚ್ಚಿ ಈಜಿದ್ದು ಇದೆ. ಇನ್ನು ಮುಂದೆ ಹೋಗಿ ಮಳೆ ಬಂದು ನಿಂತ ತಕ್ಷಣ ಊರಲ್ಲಿರುವ ಚರಂಡಿಗಳು ತುಂಬಿ ಹರಿಯುವಾಗ ನದಿಗಳಂತೆ ಕಾಣುತ್ತಿದ್ದವು. ಆ ನದಿಗಳಲ್ಲಿ ಓರಗೆಯ ಹುಡುಗರೆಲ್ಲಾ ಬಿದ್ದು ಕೈ ಕಾಲು ಬಡಿದು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಮತ್ತೆ ಬಡಿಸಿಕೊಳ್ಳುತ್ತಿದ್ದುದ್ದು ಉಂಟು.
ಅದಾಗಿ ಸ್ವಲ್ಪ ದೊಡ್ಡವರಾಗುವ ಹೊತ್ತಿಗೆ ಮನೆಯಲ್ಲಿದ್ದ ಗೋಣಿ ಚೀಲವನ್ನು ಅಜ್ಜಿಯರು ಮಾಡಿಕೊಡುವ ಕೊಪ್ಪೆ ಎಂದು ಹೇಳುವ ಅದನ್ನು ತಲೆಗೆ ಹಾಕಿಕೊಂಡು ಊರೆಲ್ಲಾ ಸುತ್ತುವುದು. ಆ ಸಂದರ್ಭಕ್ಕೆ ಊರಿನ ವಾತವರಣವೂ ಹಾಗೇ ಇತ್ತು. ಮಳೆ ನಿಂತ ತಕ್ಷಣ ದೊಡ್ಡವರೆಲ್ಲಾ ಒಂದು ಸಾರಿ ಎಲ್ಲೆಲ್ಲಿ ಏನಾಗಿದೆ ಎಲ್ಲೆಲ್ಲಿ ಮನೆ ಬಿದ್ದಿದೆ. ಯಾವ್ಯಾವ ತೋಟದಲ್ಲಿ ಮರ ಬಿದ್ದಿದೆ ಎಂದು ಸುತ್ತು ಹೊಡೆಯುತ್ತಿದ್ದರು. ಅವರ ನಹಂತರದ ತಲೆಮಾರು ನಾವೇ ಎಂಬ ಭ್ರಮೆಯಲ್ಲಿ ನಾವು ಅವರಿಂದೆ ತಿರುಗಿದ ಅನುಭವ ಮುಗಿವ ಹೊತ್ತಿಗೆ ಹೊಸದುರ್ಗ ಮುಟ್ಟಿದ್ದೆ.